ಉಡುಪಿ ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸರ್ವ ಸಿದ್ಧತೆ: ಎಸ್ಪಿ ಲಕ್ಷ್ಮಣ್ ನಿಂಬರಗಿ

ಉಡುಪಿ, ಮೇ 10: ಮೇ 12ರ ಶನಿವಾರ ಉಡುಪಿ ಜಿಲ್ಲೆಯಾದ್ಯಂತ ಮುಕ್ತ, ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 1103 ಮತಗಟ್ಟೆಗಳಿದ್ದು, ಇವುಗಳಲ್ಲಿ 226 ಸೂಕ್ಷ್ಮ ಹಾಗೂ ಉಳಿದ 877 ಸಾಮಾನ್ಯ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿರುವ 54 ಮತಗಟ್ಟೆಗಳಿಗೆ ವಿಶೇಷ ಭದ್ರತೆ ಇರುತ್ತದೆ. ಅಲ್ಲದೇ ಜಿಲ್ಲೆಯಲ್ಲಿ ಮಹಿಳೆಯರೇ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವ ಒಟ್ಟು 10 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದವರು ವಿವರಿಸಿದರು.
ಮತದಾನದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಲಾದ ವಿಶೇಷ ಭದ್ರತಾ ವ್ಯವಸ್ಥೆಗಳ ಕುರಿತು ವಿವರಿಸಿದ ಅವರು ಮುಕ್ತ, ಶಾಂತಿ ಯುತ ಚುನಾವಣೆಗಾಗಿ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನಗರ ಹಾಗೂ ಇತರ ಕಡೆಗಳಲ್ಲಿರುವ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಪೊಲೀಸ್ ಸಿಬ್ಬಂದಿಗಳಿಗೆ ವಿವರವಾಗಿ ಮಾಹಿತಿಗಳನ್ನು ನೀಡಲಾಗಿದೆ ಎಂದರು.
ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳು ಕಳೆದ ಜ.17ರಿಂದಲೇ ಪ್ರಾರಂಭ ಗೊಂಡಿದ್ದು, ಕಳೆದ 3-4 ತಿಂಗಳಿನಿಂದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ-ಕಾನೂನು ಸುವ್ಯವಸ್ಥೆ ಕಾಪಾಡಲು ಒಟ್ಟು 2,500 ಸಿಬ್ಬಂದಿಗಳು ಜಿಲ್ಲೆಯಲ್ಲಿದ್ದಾರೆ ಎಂದರು.
ಜಿಲ್ಲೆಯಲ್ಲಿ 16 ಕಂಪೆನಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, 3 ಕಂಪೆನಿ ಕೆಎಸ್‌ಆರ್‌ಪಿ, ಒಬ್ಬ ಎಸ್ಪಿ, ಒಬ್ಬ ಎಎಸ್ಪಿ, 6ಮಂದಿ ಡಿವೈಎಸ್ಪಿ, 15 ಸಿಪಿಐ, 32 ಪಿಎಸ್‌ಐ, 140 ಎಎಸ್‌ಐಗಳು ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿಗಳು ಭದ್ರತಾ ಕಾರ್ಯದಲ್ಲಿರುತ್ತಾರೆ ಎಂದು ನಿಂಬರಗಿ ವಿವರಿಸಿದರು.
ಜಿಲ್ಲೆಯಲ್ಲಿ 17 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. 45 ಪ್ವೈಯಿಂಗ್ ಸ್ಕ್ವಾಡ್ ದಿನದ 24 ಗಂಟೆ ಕಾಲವೂ ನಿರಂತರವಾಗಿ ಕಾರ್ಯನಿರತವಾಗಿವೆ. ಜಿಲ್ಲೆಯಲ್ಲಿ 3858 ಪರವಾನಿಗೆಯ ಶಸ್ತ್ರಾಸ್ತ್ರಗಳಿದ್ದು, ಇವುಗಳಲ್ಲಿ 3835 ಶಸ್ತ್ರಾಸ್ತ್ರಗಳನ್ನು ಈಗಾಗಲೇ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲಾಗಿದೆ. 23ಕ್ಕೆ ವಿನಾಯಿತಿಯನ್ನು ನೀಡಲಾಗಿದೆ ಎಂದರು. ಮುಂಜಾಗ್ರತಾ ಕ್ರಮವಾಗಿ ಜನವರಿಯಿಂದ ಈವರೆಗೆ 2232 ಭದ್ರತಾ ಕೇಸುಗಳನ್ನು ದಾಖಲಿಸಿ, ರೌಡಿ ಶೀಟರ್, ಅಪರಾಧಿಗಳು, ಅಪರಾಧಿ ದಾಖಲೆ ಇರುವವರಿಂದ ಮುಚ್ಚಳಿಕೆಯನ್ನು ಬರೆಸಿಕೊಂಡಿದ್ದೇವೆ. ಫೆಬ್ರವರಿ ತಿಂಗಳಿನಿಂದ ಈವರೆಗೆ 4818 ಜಾಮೀನು ರಹಿತ ವಾರೆಂಟ್ ಗಳನ್ನು ಹೊರಡಿಸಿದ್ದು, ಇವುಗಳಲ್ಲಿ 4300 ವಾರೆಂಟ್‌ಗಳನ್ನು ಜಾರಿಗೊಳಿಸಿ ದ್ದೇವೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮೂವರ ವಿರುದ್ಧ ಗೂಂಡಾ ಆ್ಯಕ್ಟ್‌ನಡಿ ಕೇಸು ದಾಖಲಿಸಲಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ 38 ಕೇಸುಗಳನ್ನು ದಾಖಲಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸರು ದಾಖಲೆಗಳಿಲ್ಲದ ಒಟ್ಟು 96,62,130ರೂ.ಗಳನ್ನು ವಶಪಡಿಸಿ ಕೊಂಡಿದ್ದು, ಇದರಲ್ಲಿ ದಾಖಲೆ ಪರಿಶೀಲನೆ ಬಳಿಕ 26,65,160ರೂ.ಗಳನ್ನು ಸಂಬಂಧಿತರಿಗೆ ಬಿಡುಗಡೆಗೊಳಿಸಲಾಗಿದೆ. ಪೊಲೀಸರು ಮತ್ತು ಅಬಕಾರಿ ಸಿಬ್ಬಂದಿಗಳು ಸೇರಿ 13,531.36ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲಕ್ಷ್ಮಣ್ ನಿಂಬರಗಿ ತಿಳಿಸಿದರು.







