ಚುನಾವಣಾ ಆ್ಯಪ್‌ನಿಂದ 149 ಬೂತ್‌ಗಳ ಸರದಿ ಸಾಲಿನ ಮಾಹಿತಿ: ಜಿಲ್ಲಾಧಿಕಾರಿ ಪ್ರಿಯಾಂಕ
ಕುಂದಾಪುರ ಕ್ಷೇತ್ರದಲ್ಲಿ ಟೋಕನ್ ವ್ಯವಸ್ಥೆ ಜಾರಿ

ಉಡುಪಿ, ಮೇ 10: ಮೇ 12ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮತದಾರರ ಅನುಕೂಲಕ್ಕಾಗಿ ಚುನಾವಣಾ ಆ್ಯಪ್ ಒಂದನ್ನು ರೂಪಿಸಿದ್ದು, ಅದರಿಂದ ನಗರ ಪ್ರದೇಶದ 149 ಮತಗಟ್ಟೆಗಳ ಸರದಿ ಸಾಲಿನ ಮಾಹಿತಿಗಳನ್ನು ಪ್ರತಿ 10 ನಿಮಿಷಗಳಿಗೊಮ್ಮೆ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಶನಿವಾರ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ವಿವರಗಳನ್ನು ನೀಡುತಿದ್ದ ಅವರು ಈ ವಿಷಯ ತಿಳಿಸಿದರು.
ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಿದಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಗರ ಪ್ರದೇಶಗಳಲ್ಲಿರುವ 149 ಆಯ್ದ ಮತಗಟ್ಟೆಗಳಲ್ಲಿರುವ ಮತದಾರರ ಸಾಲಿನ ಸರದಿ ಮಾಹಿತಿಯನ್ನು ಪ್ರತಿ 10 ನಿಮಿಷಕ್ಕೊಮ್ಮೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ಮತದಾರ ಮತದಾನಕ್ಕೆ ಹೋಗುವ ಸಮಯವನ್ನು ನಿರ್ಧರಿಸಬಹುದಾಗಿದೆ ಎಂದವರು ನುಡಿದರು.
ಇದೀಗ ಮೊದಲ ಬಾರಿ ಕುಂದಾಪುರ ಕ್ಷೇತ್ರದ ಮತಗಟ್ಟೆಗಳಲ್ಲಿ ಟೋಕನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತಿದ್ದು, ಇದರಿಂದ ಮತ ಚಲಾಯಿಸಲು ಬಂದ ಮತದಾರ ಮತಗಟ್ಟೆಯಲ್ಲಿ ಟೋಕನ್ ಪಡೆದು, ಅಲ್ಲೇ ತೆರೆದಿರುವ ವಿಶ್ರಾಂತಿ ಕೊಠಡಿಯಲ್ಲಿ ಕುಳಿತಿದ್ದು, ತನ್ನ ಸರದಿ ಬಂದಾಗ ಹೋಗಿ ಮತ ಚಲಾಯಿಸಬಹುದಾಗಿದೆ. ಇದರಿಂದ ಮತಗಟ್ಟೆಗಳಲ್ಲಿ ಕೆಲವೊಮ್ಮೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಶ್ರಮ ತಪ್ಪಲಿದೆ. ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಅಸ್ವಸ್ಥರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ವಿಕಲಚೇತನ ಮತದಾರರ ಅನುಕೂಲಕ್ಕಾಗಿ 555 ಮತಗಟ್ಟೆ ಪ್ರದೇಶಗಳಿಗೆ ವೀಲ್‌ಚೇರ್ ಸೌಲಭ್ಯ ಹಾಗೂ ದೃಷ್ಟಿ ದೋಷವುಳ್ಳ ಮತದಾರರಿ ಗಾಗಿ 328 ಮತಗಟ್ಟೆ ಪ್ರದೇಶಗಳಿಗೆ ಬೂತಗನ್ನಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದರು. ಅಲ್ಲದೇ ವಿವಿಧ ಮತಗಟ್ಟೆಗಳಿಗೆ 274 ಮೈಕ್ರೋ ಅಬ್ಸರ್‌ವರ್‌ಗಳನ್ನು ಚುನಾವಣಾ ಆಯೋಗದಿಂದ ನಿಯುಕ್ತಿಗೊಂಡ ಚುನಾವಣಾ ವೀಕ್ಷಕರು ನೇಮಿಸಿದ್ದು, ಅವರಿಗೆ ತರಬೇತಿಯನ್ನು ಸಹ ನೀಡಲಾಗಿದೆ ಎಂದರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಲ್ಲಿ ಒಟ್ಟು 132 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಈ ಮತಗಟ್ಟೆಗಳಲ್ಲಿ ಮತದಾನದ ಸಂಪೂರ್ಣ ಚಟುವಟಿಕೆಗಳನ್ನು ಜಿಲ್ಲಾಧಿಕಾರಿ ಕಚೇರಿ, ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿ ಕುಳಿತು ವೀಕ್ಷಿಸಬಹುದಾಗಿದೆ ಎಂದು ಪ್ರಿಯಾಂಕ ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನಕ್ಕೆ 48 ಗಂಟೆ ಮುಂಚಿತವಾಗಿ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದ್ದು, ಆಯಾ ಕ್ಷೇತ್ರದ ಮತದಾರರಲ್ಲದ, ಹೊರಗಿನಿಂದ ಬಂದ ಪ್ರಚಾರಕರು, ಪಕ್ಷದ ಕಾರ್ಯಕರ್ತರು ಅಲ್ಲಿಂದ ತೆರಳಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 6342 ಮಂದಿ ಚುನಾವಣಾ ಸಿಬ್ಬಂದಿಗಳು ನೇಮಕ ಗೊಂಡಿದ್ದಾರೆ. ಮೊದಲ ಬಾರಿಗೆ ಬ್ಯಾಂಕ್ ನೌಕರರನ್ನು ಸಹ ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿದೆ. ಅಂಚೆ ಮತದಾನದ 1400 ಮತಪತ್ರವನ್ನು ಸ್ವೀಕರಿಸಲಾಗಿದೆ. 154 ಸರ್ವಿಸ್ ಮತದಾರರು ಜಿಲ್ಲೆಯಲ್ಲಿದ್ದಾರೆ ಎಂದರು.
ಮಸ್ಟರಿಂಗ್ ಕಾರ್ಯ ನಾಳೆ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ಮೂರು ಕೇಂದ್ರಗಳಲ್ಲಿ ನಡೆಯಲಿದ್ದು, ಇಲ್ಲಿಗೆ ಚುನಾವಣಾ ಸಿಬ್ಬಂದಿಗಳನ್ನು ಕರೆತರಲು ಬೆಳಗ್ಗೆ 5:30ರಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಮಸ್ಟರಿಂಗ್ ನಡೆಯುವ ಕೇಂದ್ರದಲ್ಲೂ ಡಿಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಬಳಿಕ ಎಲ್ಲಾ ಮತಯಂತ್ರಗಳನ್ನು ಉಡುಪಿಗೆ ತರಲಾಗುವುದು. ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಪ್ರಿಯಾಂಕ ಮೇರಿ ತಿಳಿಸಿದರು.
ಇಂದು ಸಂಜೆ 6ರಿಂದ ಮೇ 12ರ ರಾತ್ರಿ 8ಗಂಟೆಯವರೆಗೆ ಅಲ್ಲದೇ ಮತ ಎಣಿಕೆ ನಡೆಯುವ ಸಂಬಂಧ ಮೇ 14ರ ಸಂಜೆ 6ಗಂಟೆಯಿಂದ 15ರ ಮಧ್ಯರಾತ್ರಿ 12ಗಂಟೆಯವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದೇ ಅವಧಿಯಲ್ಲಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ ಎಂದು ಅವರು ನುಡಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.







