ಲಿಂಗಾಯತರು-ವೀರಶೈವ ಬೇರೆಯಲ್ಲ, ಒಂದೇ: ಎಂ.ಚಿದಾನಂದಮೂರ್ತಿ

ಬೆಂಗಳೂರು, ಮೇ 10: ಲಿಂಗಾಯತರು ಪ್ರತ್ಯೇಕ ಎನ್ನುವುದು ಎಲ್ಲಿಯೂ ಇಲ್ಲ. ಬದಲಾಗಿ ಲಿಂಗಾಯತರು ಮತ್ತು ವೀರಶೈವರು ಒಂದೇ ಎಂದು ಸಂಶೋಧಕ ಎಂ.ಚಿದಾನಂದಮೂರ್ತಿ ಹೇಳಿದ್ದಾರೆ.
ಗುರುವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿ ಕರ್ನಾಟಕ ವಿಕಾಸ ರಂಗ ಹಾಗೂ ಕರ್ನಾಟಕ ವಿಚಾರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಎಂ.ಚಿದಾನಂದಮೂರ್ತಿ-88, ‘ನಾನು ಮತ್ತು ನನ್ನ ಬದುಕು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಿಂಗಾಯತ ವೀರಶೈವ ಬೇರೆ ಬೇರೆ ಎಂಬುದನ್ನು ಬಿಟ್ಟು, ಎಲ್ಲರೂ ಒಂದಾಗಿ ಬಾಳಬೇಕು. ಬಸವಣ್ಣ ಅವರ ತತ್ವಗಳನ್ನು ಪಾಲಿಸಬೇಕು ಎಂದ ಅವರು, ನಾನು ನ್ಯಾಯದ ಪರವಾಗಿ ಮಾತನಾಡಲು ಎಂದಿಗೂ ಹಿಂಜರಿಯುವುದಿಲ್ಲ. ಈ ವಿಚಾರವಾಗಿ ಎಂದಿಗೂ ಸತ್ಯವನ್ನೇ ಹೇಳುತ್ತೇನೆ. ಹಾಗಾಗಿ ಸತ್ಯವನ್ನು ಹೇಳುವವರಿಗೆ ಲೋಕವೆಲ್ಲ ಶತ್ರು ಎಂದು ನುಡಿದರು.
ಕನ್ನಡಪರ ಹೋರಾಟ, ಚಳವಳಿಗಳು ಇಂದು ತಮ್ಮ ದಿಕ್ಕು ಬದಲಿಸಿವೆ. ಸಂಘಟನೆಗಳು ಇರುವುದು ಕನ್ನಡಪರ ಕೆಲಸ ಮಾಡಲು. ಅದನ್ನು ಬಿಟ್ಟು ಹಣ ದೋಚುವುದು ಅವರ ಕೆಲಸವಲ್ಲ. ಈ ಹಿಂದಿನ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಾಡು, ನುಡಿ, ಭಾಷೆಗಾಗಿ ತಮ್ಮ ಕೈಯಿಂದ ಸ್ವತಃ ಹಣ ಖರ್ಚು ಮಾಡುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದೆ. ಕನ್ನಡ ಚಳವಳಿಗಳು ಕೇವಲ ವಿಡಂಬನೆ, ಬೆದರಿಕೆಗಳಾಗಿವೆ. ಹೋರಾಟಗಾರರು ತಪ್ಪು ದಾರಿ ತುಳಿಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ, ಲೇಖಕ ರಾ.ನಂ.ಚಂದ್ರಶೇಖರ್, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಪಾಲನೇತ್ರ, ವಿಕಾಸ ರಂಗ ಸಂಚಾಲಕ ವ.ಚ.ಚನ್ನೇಗೌಡ ಸೇರಿ ಪ್ರಮುಖರು ಉಪಸ್ಥಿತರಿದ್ದರು.







