ದೇಶಕ ಏಕತೆ, ಅಭಿವೃದ್ದಿಗೆ ಕಾಂಗ್ರೆಸ್‌ನ್ನು ಬೆಂಬಲಿಸಿ: ಲೋಬೊ

ಮಂಗಳೂರು, ಮೇ 10: ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಓಟು ಕೇಳುವುದಿಲ್ಲ. ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್‌ನ್ನು ಬೆಂಬಲಿಸುವಂತೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಪ್ರಚಾರದ ಸಮಾರೋಪ ಅಂಗವಾಗಿ ನಡೆದ ರೋಡ್ ಶೋ ಬಳಿಕ ಉರ್ವ ಮಾರ್ಕೆಟ್ ಮೈದಾನದಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಇಡೀ ದೇಶದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಇರುವ ತನಕ ಯಾರಿಂದಲೂ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಮಾತನಾಡಿ, ಇದು ಸತ್ಯ- ಅಸತ್ಯ, ಧರ್ಮ- ಅಧರ್ಮಗಳ ನಡುವಿನ ಹೋರಾಟ. ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರ 15 ಸಾವಿರ ಕೋಟಿ ರೂ. ಅಭಿವೃದ್ಧಿ ಕಾರ್ಯ ನಡೆಸಿದೆ. ಆದರೂ ಅಭಿವೃದ್ದಿ ವಿಚಾರದಲ್ಲಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಜಿಲ್ಲೆಯನ್ನು ವಿದ್ಯಾವಂತರು, ಮತ್ತು ಸೌಹಾರ್ದಯುತ ನಾಡನ್ನಾಗಿ ಮಾಡಲು ಕಾಂಗ್ರೆಸ್‌ಗೆ ಬೆಂಬಲಿಸಿ ಎಂದರು.ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಮೇಯರ್ ಭಾಸ್ಕರ ಕೆ., ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್, ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ವಿಶ್ವಾಸ್‌ಕುಮಾರ್ ದಾಸ್, ಮಾಜಿ ಮೇಯರ್ ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.
ಶಾಸಕ ಜೆ.ಆರ್.ಲೋಬೊ ಅವರ ರೋಡ್ ಶೋ ನಗರದ ನೆಹರು ಮೈದಾನದಲ್ಲಿ ಆರಂಭಗೊಂಡು ಕ್ಲಾಕ್ ಟವರ್, ಸಿಗ್ನಲ್ , ಕೆಎಸ್ ರಾವ್ ರೋಡ್, ಪಿವಿಎಸ್ ವೃತ್ತಘಿ, ಲಾಲ್‌ಬಾಗ್, ಲೇಡಿಹಿಲ್ ಮೂಲಕ ಉರ್ವ ಮಾರ್ಕೆಟ್ ಮೈದಾನದಲ್ಲಿ ಮುಕ್ತಾಯಗೊಂಡಿತು.







