132 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಡಿ.ಕೆ.ಶಿವಕುಮಾರ್ ವಿಶ್ವಾಸ
ಕೊಪ್ಪದಲ್ಲಿ ಕಾಂಗ್ರೆಸ್ ಮಹಿಳಾ ಸಮಾವೇಶ ಉದ್ಘಾಟನೆ

ಮಂಡ್ಯ, ಮೇ 10: ರಾಜ್ಯದಲ್ಲಿ 132ಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲ್ಲಿದ್ದು, ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ಶತಸಿದ್ಧವೆಂದು ವಿಶ್ವಾಸ ವ್ಯಕ್ತಪಡಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಅವರ ಕೈಬಲಪಡಿಸಿಬೇಕೆಂದು ಮನವಿ ಮಾಡಿದ್ದಾರೆ.
ನಾಗಮಂಗಲ ವಿಧಾನಸಭಾ ಕ್ಷೇತ್ರದ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಯಾವುದೇ ಟೀಕೆ, ಟಿಪ್ಪಣಿಗಳಿಗೆ ಮುಂದಾಗದೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರಾಭಿವೃದ್ಧಿ ಮಾಡಿರುವ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಅವರನ್ನು ಬೆಂಬಲಿಸಬೇಕೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ರೈತರ ಸಾಲಮನ್ನ, ಬಿಸಿಯೂಟ ಸೇರಿದಂತೆ ಇನ್ನಿತರೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿದೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬಿಜೆಪಿ ಪಕ್ಷವನ್ನು ಸೇರಿದ ದಿನದಿಂದಲೇ ಪಕ್ಷದ ವಿಚಾರಧಾರೆ ಸರಿಯಿಲ್ಲವೆಂಬುದು ಅವರಿಗೆ ಅರಿವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ದಿನವೇ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತಾರೆಂಬ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಅಂತರ್ಜಲ ಅಭಿವೃದ್ಧಿ, ನಾಲೆ ಆಧುನೀಕರಣ, ಶಾಶ್ವತ ಅಭಿವೃದ್ಧಿ ಕೆಲಸಗಳಿಗೆ 60 ಸಾವಿರ ಕೋಟಿ ಹಣ ಮೀಸಲಿಟ್ಟಿದೆ ಎಂದ ಅವರು, ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದಾರೆಂದು ಆರೋಪಿಸಿದರು.
ಮಾಜಿ ಶಾಸಕ, ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ರಾಜಕಾರಣದ ಮುಂದೆ ತಾನಿನ್ನು ಬಹಳ ಚಿಕ್ಕವನಾಗಿದ್ದು ಅವರ ಬಗ್ಗೆ ಹೆಚ್ಚಿನ ಗೌರವವಿರುವುದರಿಂದ ನಾನೇನು ಹೆಚ್ಚಿಗೆ ಮಾತನಾಡುವುದಿಲ್ಲ. ಆದರೂ ಈ ವಯಸ್ಸಿನಲ್ಲಿ ಇಂತಹ ಮಾತುಗಳು ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಅವರ ಬಾಯಿಯಲ್ಲಿ ಬರುವ ಮಾತನ್ನು ಆ ದೇವರೇ ನೋಡಿಕೊಳ್ಳಲಿ ಎಂದರು.
ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಬಗ್ಗೆ ಮಾತನಾಡುವ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು, ಪ್ರಧಾನಿ ಮತ್ತು ಸಿಎಂ ಆಗಿದ್ದ ವೇಳೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ಬಗ್ಗೆ ಜನರಿಗೆ ಉತ್ತರಿಸುವಂತೆ ಅವರು ಸವಾಲು ಹಾಕಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮದ್ದೂರು ಕ್ಷೇತ್ರದ ಅಭ್ಯರ್ಥಿ ಮಧು. ಜಿ.ಮಾದೇಗೌಡ ಮಾಜಿ ಶಾಸಕ ಹಾಗೂ ವೀಕ್ಷಕ ಸಂಪಂಗಿ, ಮಾಜಿ ಶಾಸಕ ಬಿ.ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷರಾದ ಬಿ.ವಿವೇಕಾನಂದ, ಎಸ್.ಗುರಚರಣ್, ಮುಖಂಡರಾದ ಎ.ಟಿ. ಕರೀಗೌಡ, ಇಂಡುವಾಳು ಸಚ್ಚಿದಾನಂದ, ಕುಮಾರ ಕೊಪ್ಪ, ದಿವಾಕರ್, ಲಕ್ಷ್ಮಣ್‍ಕುಮಾರ್, ಅಂಜನ ಶ್ರೀಕಾಂತ, ಜೋಗೀಗೌಡ, ಚಿತ್ರನಟ ಮತ್ತು ಚಲುವರಾಯಸ್ವಾಮಿ ಪುತ್ರ ಸಚಿನ್, ಇತರರು ಉಪಸ್ಥಿತರಿದ್ದರು.







