ಬಿಜೆಪಿಗರಿಂದ ಸೊರಕೆ ವಿರುದ್ಧ ಕರಪತ್ರ: ಬಿಲ್ಲವ ಪರಿಷತ್ ಆರೋಪ
ಕಾಪು, ಮೇ 10: ಕಾಪು ಕ್ಷೇತ್ರದಲ್ಲಿ ಬಿಜೆಪಿಯು ವಿನಯಕುಮಾರ್ ಅವರನ್ನು ಸೋಲಿಸುವ ಉದ್ದೇಶದಿಂದ ಇದೀಗ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದು, ಸೊರಕೆ ವಿರುದ್ಧ ಬಿಲ್ಲವರನ್ನು ಎತ್ತಿಕಟ್ಟುವ ಯತ್ನ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವರ ಪರಿಷತ್ ಆರೋಪಿಸಿದೆ.
ಕಾಪು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಶೇಖರ್ ಕರ್ಕೇರ, ಸೊರಕೆ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅದಕ್ಕೆ ಬಿಲ್ಲವರ ಪರಿಷತ್ ಹೆಸರನ್ನು ಬಳಸಿಕೊಂಡಿದೆ. ಇದೀಗ ಮತ್ತೆ ಮನೆಮನೆಗೆ ಕರಪತ್ರಗಳನ್ನು ಹಂಚುವುದು ಬೆಳಕಿಗೆ ಬಂದಿದೆ. ಇದು ಖಂಡನೀಯ ಎಂದರು.
ಕಾಪು ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸೋಲುವ ಭೀತಿಗೆ ಒಳಗಾಗಿರುವ ಬಿಜೆಪಿ ಅಪಪ್ರಚಾರದ ಮೂಲಕ ಬಿಲ್ಲವರಲ್ಲಿ ಒಡಕು ಮೂಡಿಸುವ ಯತ್ನ ನಡೆಸುತ್ತಿದೆ. ಇದನ್ನು ಮತ್ತೆ ಮುಂದುವರಿಸಿದರೆ ಪ್ರತಿ ಬಿಲ್ಲವ ಸಂಘದ ಮೂಲಕ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಅವಿಭಜಿತ ಜಿಲ್ಲೆಯಲ್ಲಿ ಪ್ರಬಲ ಸಮುದಾಯವಾಗಿರುವ ಬಿಲ್ಲವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡದೆ ಕಡೆಗಣಿಸಿರುವ ಬಿಜೆಪಿ ಇದೀಗ ಮತ್ತೊಂದು ಅಪಪ್ರಚಾರದ ಮೂಲಕ ಬಿಲ್ಲವರ ಮಧ್ಯೆ ಹುಳಿ ಹಿಂಡುವ ಕಾರ್ಯ ನಡೆಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ತಿಳಿಸಿದೆ.
ನಿಮ್ಮ ಸಾಧನೆಯನ್ನು ನೀವು ಎರಡು ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯವನ್ನು ಪ್ರಾಮಾಣಿಕವಾಗಿ ಜನರ ಮುಂದಿರಿಸಿ ಮತಯಾಚನೆ ನಡೆಸಬಹುದು. ಇದಕ್ಕೆ ಆಕ್ಷೇಪವಿಲ್ಲ. ಆದರೆ ನಿಮ್ಮ ರಾಜಕೀಯ ಆಟಕ್ಕೆ ಬಿಲ್ಲವರ ಸಮುದಾಯವನ್ನು ಬಳಸಿಕೊಂಡು ಸಮುದಾಯವನ್ನು ಒಡೆಯುವ ಯತ್ನವನ್ನು ಖಂಡಿಸುವುದಾಗಿ ಹೇಳಿದರು.
ಸೊರಕೆ ಅವರು ಕೇವಲ ಬಿಲ್ಲವರ ಮತಗಳಿಂದ ಮಾತ್ರ ಗೆದ್ದು ಬಂದವರಲ್ಲ. ಅವರನ್ನು ಎಲ್ಲಾ ಸಮುದಾಯದವರೂ ಬೆಂಬಲಿಸಿ ಮತ ನೀಡಿದ್ದಾರೆ. ಅವರು ಎಲ್ಲಾ ಸಮುದಾಯವನ್ನು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಪೂರ್ಣವಾಗಿ ಮೂಲ ಸೌಕರ್ಯಗಳ ಅಭಿವೃದ್ಧಿ ಪಡಿಸಿದ್ದಾರೆ. ಇದರಿಂದ ಅವರಿಗೆ ಜನಬೆಂಬಲ ಸಿಕ್ಕಿದೆ. ಇದರಿಂದ ಹತಾಶೆಗೊಂಡು ಸೊರಕೆ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದರು.
ಶೋಭಾ ಪಾಂಗಾಳ, ಹೇಮಲತಾ ಕಟಪಾಡಿ, ಶಕುಂತಲಾ, ಸುಲೋಚನಾ ಮೂಳೂರು, ಆಶಾ ಕಟಪಾಡಿ ಉಪಸ್ಥಿತರಿದ್ದರು.







