ಮಂಡ್ಯ: ಕುಮಾರಸ್ವಾಮಿ ಆರೋಪಕ್ಕೆ ದರ್ಶನ್ ಪುಟ್ಟಣ್ಣಯ್ಯ ತಿರುಗೇಟು

ಮಂಡ್ಯ, ಮೇ 10: ಎಚ್.ಡಿ.ಕುಮಾರಸ್ವಾಮಿಯವರೇ ನನ್ನ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಆಸ್ತಿ, ನಿಮ್ಮ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರ ಆಸ್ತಿಯನ್ನು ಅದಲು ಬದಲು ಮಾಡಿಸಿಕೊಟ್ಟರೆ ನನಗೆ ಬರುವ ನೂರಾರು ಕೋಟಿ ರೂ.ಗಳನ್ನು ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ. ನಾನು ನಿಮಗೆ ವಚನ ಕೊಡುತ್ತೇನೆ. ನಾನು ನಿಮ್ಮಂತೆ ವಚನ ಭ್ರಷ್ಟನಾಗುವುದಿಲ್ಲ ಎಂದು ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಕ್ಷೇತ್ರದ ದುದ್ದ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿರುವ ಎಚ್.ಡಿ.ಕುಮಾರಸ್ವಾಮಿ, ರೈತರ ಹೆಸರಿನಲ್ಲಿ ಕಳೆದ 5 ವರ್ಷ ಶಾಸಕರಾಗಿ ಆಡಳಿತ ನಡೆಸಿದ ಕೆ.ಎಸ್.ಪುಟ್ಟಣ್ಣಯ್ಯ ಯಾವ ಕೆಲಸ ಮಾಡಿದ್ದಾರೆ, ಹೇಗೆ ಹಣ ಮಾಡಿದ್ದಾರೆ ಎಂಬುದು ನನಗೆ ಗೊತ್ತು ಎಂದು ನನ್ನ ತಂದೆ ಮೇಲೆ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ಇವರ ಆರೋಪ ಕೇಳಿದ ನನ್ನ ತಾಯಿ ಸುನೀತಾ ಪುಟ್ಟಣ್ಣಯ್ಯ ಕಣ್ಣೀರಿಟ್ಟರು. ನನ್ನ ಸಹೋದರಿಯರಾದ ಸ್ಮಿತಾ ಹಾಗೂ ಅಕ್ಷತಾ ದುಖಃಪಟ್ಟರು. ನನಗೂ ಅತೀವಾ ನೋವಾಯಿತು ಎಂದು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನನ್ನ ತಂದೆ ಕೆ.ಎಸ್.ಪುಟ್ಟಣ್ಣಯ್ಯ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿಲ್ಲ, ಜತೆಗೆ ನಾಟಕ ಆಡಿಲ್ಲ ಇಡೀ ರಾಜ್ಯಕ್ಕೆ ಎಂದು ಗೊತ್ತಿದೆ. ಈ ರೀತಿಯಲ್ಲಿರುವಾಗ ಕುಮಾರಸ್ವಾಮಿಯವರು ನನ್ನ ತಂದೆ ಬಗ್ಗೆ ಸುಳ್ಳು ಆರೋಪ ಮಾಡಬಾರದಿತ್ತು ಎಂದಿರುವ ದರ್ಶನ್ ಪುಟ್ಟಣ್ಣಯ್ಯ, ಕುಮಾರಸ್ವಾಮಿ ಅವರ ಹತಾಶೆ ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ಮತಪ್ರಚಾರ ವೇಳೆ ಭೇಟಿ ಮಾಡಿದ ಅನೇಕ ಜೆಡಿಎಸ್ ಮುಖಂಡರು, 'ನಮ್ಮ ಹುಡುಗರು ಈಗ ನಿನ್ನ ಪರ ಆಗಿಬಿಟ್ಟಿದ್ದಾರಪ್ಪ, ನಮ್ಮ ಮನೆಯ ಹೆಣ್ಣು ಮಕ್ಕಳು ನಿನಗೇ ಓಟು ಹಾಕೋದು ಗ್ಯಾರಂಟಿ ಅನ್ನಿಸ್ತಾ ಇದೆ. ಈಗ ಅವ್ರು ನಮ್ಮ ಮಾತು ಕೇಳುತ್ತಿಲ್ಲ. ನಿಮ್ಮಪ್ಪನ ಕಾಲದಲ್ಲಿ ಈ ರೀತಿ ಆಗಿರಲಿಲ್ಲ. ಇದು ನುಂಗಲಾರದ ತುತ್ತಾಗಿದೆ’ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ಕುಮಾರಸ್ವಾಮಿಗೆ ಹತಾಶೆ ಸಹಜವೇ ಎಂದು ಹೇಳಿದರು.
ಚುನಾವಣೆ ವೇಳೆ ಆರೋಪ, ಪ್ರತ್ಯಾರೋಪ ಸಹಜ. ನಾನಂತೂ ಯಾರ ಮೇಲೂ ಸುಳ್ಳು ಆರೋಪ ಮಾಡುವುದಿಲ್ಲ. ಮುಂದೆಂದೂ ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಬಗ್ಗೆ ಇಂತಹ ಅನ್ಯಾಯದ ಮಾತು ಆಡಬೇಡಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ದರ್ಶನ್ ಪುಟ್ಟಣ್ಣಯ್ಯ ವಿನಂತಿಸಿದ್ದಾರೆ.







