ಸಂವಿಧಾನ ಉಳಿಯಬೇಕಾದರೆ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕಾಗಿದೆ: ಎ.ಕೆ. ಸುಬ್ಬಯ್ಯ

ಮಡಿಕೇರಿ,ಮೇ.10: ಕರ್ನಾಟಕ ವಿಧಾನಸಭೆಗಾಗಿ ಇದೀಗ ನಡೆಯುತ್ತಿರುವ ಚುನಾವಣೆ ಕೇವಲ ರಾಜಕೀಯ ಪಕ್ಷಗಳ ಸೋಲು ಗೆಲುವಿನ ಹಗ್ಗ ಜಗ್ಗಾಟ ಅಲ್ಲ. ಇದು ದೇಶಕ್ಕೆ ಸಮಾನತೆ, ಸಹೋದರತ್ವ, ಸಹಬಾಳ್ವೆಯನ್ನು ನೀಡಿದ ರಾಜ್ಯಾಂಗ ಉಳಿಯಬೇಕು ಎನ್ನುವವರ ಮತ್ತು ರಾಜ್ಯಾಂಗವನ್ನೇ ನುಚ್ಚುನೂರು ಮಾಡಿ ಹಿಂದುತ್ವ ಪ್ಯಾಸಿಸಂ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಶಕ್ತಿಗಳ ನಡುವಿನ ಹೋರಾಟದ ಚುನಾವಣೆಯಾಗಿದೆ ಎಂದು ಹಿರಿಯ ರಾಜಕೀಯ ಮುತ್ಸದ್ದಿ ಎ.ಕೆ. ಸುಬ್ಬಯ್ಯ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಸಂವಿಧಾನವನ್ನು ಉಳಿಸಿಕೊಳ್ಳಬೇಕೆಂದರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಬೇಕಾಗಿದೆ. ಈ ದೃಷ್ಟಿಯಿಂದ ಹಿಂದೂ ರಾಷ್ಟ್ರವಾದಿಯಾಗಿರುವ ಬಿಜೆಪಿ ವಿರುದ್ದವಿರುವ ಎಲ್ಲಾ ಮತದಾರರು ಒಗ್ಗಟ್ಟಾಗಿ ಬಿಜೆಪಿ ಯನ್ನು ಸೋಲಿಸುವ ಪ್ರಬಲ ಅಭ್ಯರ್ಥಿಗಳಿಗೆ ಮತ ನೀಡಿ ಬಿಜೆಪಿ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರುವುದಕ್ಕಾಗಿ ಹಲವಾರು ರೀತಿಯ ಷಡ್ಯಂತ್ರಗಳನ್ನು ಮಾಡುವುದಕ್ಕೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮೊದಲಾದವರು ವ್ಯಾಪಕ ಸುಳ್ಳು ಹೇಳಿಕೊಂಡು ತಿರುಗಾಡಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರದಲ್ಲಿ ಇಲ್ಲದಿದ್ದಿದ್ದರೆ ಪ್ರಧಾನಿ ಮೋದಿ ಸೇರಿದಂತೆ ಅಮಿತ್ ಶಾ, ರಾಜ್ಯ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಮೊದಲಾದವರು ಇಂದು ಜೈಲಿನಲ್ಲಿ ಇರುತ್ತಿದ್ದರು ಎಂದು ಟೀಕಿಸಿರುವ ಎ.ಕೆ ಸುಬ್ಬಯ್ಯ ಅವರು, ಕೇಂದ್ರದಲ್ಲಿ ತಮಗೆ ದೊರೆತ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇವರೆಲ್ಲಾ ಇಂದು ಜೈಲಿನ ಹೊರಗಿದ್ದಾರೆ. ಇಂತಹವರ ಕೈಗೆ ಅಧಿಕಾರ ನೀಡಿದರೆ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳುವುದು ರಾಜ್ಯದ ಜನತೆಗೆ ಕಷ್ಟವಲ್ಲ. ಅದ್ದರಿಂದ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳಬೇಕಾಗಿರುವುದು ಇಂದಿನ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಯನ್ನು ಸೋಲಿಸಿ ಅಧಿಕಾರ ಪಡೆಯುವ ಶಕ್ತಿ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಹೊರತಾಗಿ ಇತರ ಪಕ್ಷಗಳಿಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಎ.ಕೆ.ಸುಬ್ಬಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದು ‘ಜನಪರ ಸರಕಾರ’ ಎಂಬ ಖ್ಯಾತಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರೋಧಿ ಮತದಾರರು ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಸಾಮರ್ಥ್ಯ ಹೊಂದಿರುವ ಜಾತ್ಯತೀತ ವ್ಯಕ್ತಿತ್ವದ ಅಭ್ಯರ್ಥಿಗಳಿಗೆ ಮತ ನೀಡಿ ಅವರನ್ನು ಗೆಲ್ಲಿಸುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.







