ನೀರು ಕೇಳಿದ ದಲಿತ ಮಕ್ಕಳಿಗೆ ಥಳಿಸಿದರು !

ಸಾಂದರ್ಭಿಕ ಚಿತ್ರ
ಉಜ್ಜೈನಿ (ಮಧ್ಯಪ್ರದೇಶ), ಮೇ 10: ನೀರು ಕೇಳಿದ ನಾಲ್ವರು ದಲಿತ ಮಕ್ಕಳಿಗೆ ಮೇಲ್ಜಾತಿಯ ಇಬ್ಬರು ವ್ಯಕ್ತಿಗಳು ಥಳಿಸಿದ ಘಟನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಂಡಾಸಾ ಗ್ರಾಮದಲ್ಲಿರುವ ತನ್ನ ಅಜ್ಜಿ ಮನೆಗೆ ಈ ಮಕ್ಕಳು ತಮ್ಮ ಹೆತ್ತವರೊಂದಿಗೆ ಬಂದಿದ್ದರು. ಘಟನೆ ಮಂಗಳವಾರ ರಾತ್ರಿ ನಡೆದಿದೆ. ಆದರೆ, ಬುಧವಾರ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳು ಮಂಗಳವಾರ ರಾತ್ರಿ ಆಟವಾಡಿ ಬಾಯಾರಿದಾಗ ಗ್ರಾಮದ ಅರ್ಜುನ್ ಠಾಕೂರ್ ಅವರಲ್ಲಿ ನೀರು ನೀಡುವಂತೆ ವಿನಂತಿಸಿದರು. ಆದರೆ, ಠಾಕೂರ್ ನಿರಾಕರಿಸಿದ್ದರು. ಮಕ್ಕಳು ಮತ್ತೆ ಮತ್ತೆ ವಿನಂತಿಸಿದರು. ಇದರಿಂದ ಆಕ್ರೋಶಿತನಾದ ಅರ್ಜುನ್ ಹಾಗೂ ಗ್ರಾಮದ ಕನ್ಹಾ ಠಾಕೂರ್ ಮಕ್ಕಳಿಗೆ ಬೆಲ್ಟ್ನಿಂದ ಥಳಿಸಿದರು ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಲ್ಕು ಮಕ್ಕಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವೈದ್ಯಕೀಯ ಪರೀಕ್ಷೆ ಸಂದರ್ಭ ಬೆಲ್ಟ್ನ ಬಾಸುಂಡೆ ಕಂಡು ಬಂದಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳನ್ನು ಕೂಡಲೇ ಬಂಧಿಸಲಿದ್ದೇವೆ ಎಂದು ಎಎಸ್ಪಿ ಪ್ರಮೋದ್ ಸೋಂಕಾರ್ ತಿಳಿಸಿದ್ದಾರೆ.





