ಆಮಿಷಕ್ಕೊಳಗಾಗದೆ ಮತ ಚಲಾಯಿಸಿ: ಬಿ.ಎ.ಮೊಹಿದಿನ್

ಮಂಗಳೂರು, ಮೇ 10: ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವಂತೆ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ.ಮೊಹಿದಿನ್ ಮತದಾರರಿಗೆ ಕರೆ ನೀಡಿದ್ದಾರೆ.
ಮೇ 12ರಂದು ಬೆಳಗ್ಗೆಯೇ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಿ. ಮತ ಚಲಾಯಿಸುವ ಸಮಯವನ್ನು ಮಧ್ಯಾಹ್ನ ಅಥವಾ ಸಂಜೆಯವರೆಗೆ ಮುಂದೂಡಬೇಡಿ. ಸರಕಾರ ರಚನೆಯಲ್ಲಿ ನಿಮ್ಮ ಪಾತ್ರ ಮಹತ್ತರವಾಗಿರುವುದರಿಂದ ಮತದಾನದಲ್ಲಿ ಪಾಲ್ಗೊಳ್ಳಿ. ಯಾವ ಕಾರಣಕ್ಕೂ ಹಿಂಜರಿಯಬೇಡಿ. ಯಾವುದೇ ಆಮಿಷಗಳಿಗೆ ಒಳಗಾಗದೆ, ಜಾತ್ಯತೀತ ನಿಲುವಿನ ಅಭ್ಯರ್ಥಿ ಪರವಾಗಿಯೇ ಮತ ಚಲಾಯಿಸಿ ಎಂದು ಅವರು ಸಲಹೆ ನೀಡಿದ್ದಾರೆ.
ಮತದಾನದ ದಿನಾಂಕ ಸಮೀಪಿಸುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಕ್ಷುಲ್ಲಕ ವಿಚಾರಗಳನ್ನು ವೈಭವೀಕರಿಸುವ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಮತ ವಿಭಜನೆ ಮಾಡುವ ಕುತಂತ್ರ ಕಂಡುಬರುತ್ತಿದೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಬಹುದು ಅಥವಾ ಇದು ಮತದಾನದ ದುರುಪಯೋಗಕ್ಕೆ ಕಾರಣವಾಗಲೂಬಹುದು. ಮತ ವಿಭಜನೆಯ ಇಂತಹ ಕುತಂತ್ರವನ್ನು ಅಲ್ಪ ಸಂಖ್ಯಾತರು ವಿಫಲಗೊಳಿಸಿ ಕೋಮುವಾದಿಗಳನ್ನು ವಿರೋಧಿಸುವ ಪ್ರಬಲ ಜಾತ್ಯತೀತ ಅಭ್ಯರ್ಥಿ ಪರ ಮತ ಚಲಾಯಿಸಬೇಕು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







