ಟಿ.ವಿ. ಚರ್ಚೆಯಲ್ಲಿ ನ್ಯಾಯಾಧೀಶರನ್ನು ಟೀಕಿಸುವುದರಿಂದ ಕಾನೂನು ಸಂಸ್ಥೆ ನಾಶ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ

ಹೊಸದಿಲ್ಲಿ, ಮೇ 10: ನ್ಯಾಯಾಲಯದ ಒಳಗೆ ಹಾಗೂ ಟಿ.ವಿ. ಚರ್ಚೆಗಳಲ್ಲಿ ನ್ಯಾಯಮೂರ್ತಿಗಳನ್ನು ಗುರಿಯಾಗಿರಿಸಿ ಟೀಕಿಸುವ ನ್ಯಾಯವಾದಿಗಳನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಪೀಠ, ಇಂತಹ ಪ್ರವೃತ್ತಿ ಅಂತಿಮವಾಗಿ ಕಾನೂನು ಸಂಸ್ಥೆಯನ್ನು ನಾಶ ಮಾಡುತ್ತದೆ ಎಂದಿದೆ.
ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ವೈದ್ಯಕೀಯ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶ ನೀಡಲು ಕೇರಳ ಸರಕಾರ ಆಧ್ಯಾದೇಶ ಮುಂಜೂರು ಮಾಡಿರುವ ವಿರುದ್ಧ ಭಾರತೀಯ ವೈದ್ಯಕೀಯ ಮಂಡಳಿ ದಾಖಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳನ್ನು ನ್ಯಾಯವಾದಿಗಳು ಟೀಕಿಸುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಮಿಶ್ರಾ, ಈ ನ್ಯಾಯಾಲಯದಲ್ಲಿ ಯಾರನ್ನು ಬಿಟ್ಟಿದ್ದೀರಿ ?, ಎಲ್ಲರನ್ನೂ ಟೀಕಿಸಿದ್ದೀರಿ. ಒಂದು ಬಾಣದಿಂದ ಎಲ್ಲರನ್ನು ಕೊಲ್ಲಲು ನೀವು ಬಯಸುತ್ತಿದ್ದೀರಿ. ನೀವು ಈ ಕಾನೂನು ಸಂಸ್ಥೆಯನ್ನು ನಾಶ ಮಾಡುತ್ತೀರಿ ಎಂದು ಹೇಳಿದೆ. ಟಿ.ವಿ. ವಾಹಿನಿಯಲ್ಲಿ ನೀವು ನ್ಯಾಯಾಲಯದ ಕಲಾಪವನ್ನು ಚರ್ಚಿಸುತ್ತೀರಿ. ನೀವು ಏನು ಬೇಕಾದರು ನಿಂದಿಸುತ್ತೀರಿ. ನೀವು ಪ್ರತಿ ದಿನ ಕಾನೂನು ಸಂಸ್ಥೆಯನ್ನು ನಾಶ ಮಾಡುತ್ತಿದ್ದೀರಿ. ಈ ಸಂಸ್ಥೆ ರಕ್ಷಣೆಯಾದರೆ ಮಾತ್ರ ವಕೀಲರು ರಕ್ಷಣೆಯಾಗುತ್ತಾರೆ ಎಂದು ಪೀಠ ಹೇಳಿದೆ.







