ಕಾಶ್ಮೀರದಲ್ಲಿ ಏಕಪಕ್ಷೀಯ ಕದನವಿರಾಮದ ಚಿಂತನೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ: ಬಿಜೆಪಿ

ಹೊಸದಿಲ್ಲಿ, ಮೇ 10: ರಮಝಾನ್ ಮತ್ತು ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಏಕಪಕ್ಷೀಯ ಕದನ ವಿರಾಮ ಘೋಷಿಸಬೇಕೆಂಬ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರ ಚಿಂತನೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಬಿಜೆಪಿಯ ಜಮ್ಮು ಕಾಶ್ಮೀರ ಘಟಕ ಹೇಳಿದೆ.
ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಏಕಪಕ್ಷೀಯ ಕದನವಿರಾಮದ ಪ್ರಸ್ತಾವಕ್ಕೆ ಬೆಂಬಲ ದೊರೆತಿದೆ ಎಂಬ ಮೆಹಬೂಬಾ ಹೇಳಿಕೆಯನ್ನು ತಳ್ಳಿಹಾಕಿರುವ ರಾಜ್ಯ ಬಿಜೆಪಿ ವಕ್ತಾರ ಸುನಿಲ್ ಸೇಥಿ, ಪ್ರಸ್ತಾವವನ್ನು ಪಕ್ಷೇತರ ಶಾಸಕ ರಶೀದ್ ಸಭೆಯ ಮುಂದಿಟ್ಟಿದ್ದರು. ಆದರೆ ಇದನ್ನು ಬಿಜೆಪಿ ಬೆಂಬಲಿಸಿಲ್ಲ . ಏಕಪಕ್ಷೀಯ ಕದನ ವಿರಾಮದ ಚಿಂತನೆ ಸರ್ವಾನುಮತದ ನಿರ್ಧಾರವಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ 2000ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಏಕಪಕ್ಷೀಯ ಕದನ ವಿರಾಮ ಘೋಷಿಸಿರುವಂತೆಯೇ, ಈ ಬಾರಿ ಏಕಪಕ್ಷೀಯ ಕದನ ವಿರಾಮ ಘೋಷಣೆಗೆ ಕೇಂದ್ರ ಸರಕಾರ ಬೆಂಬಲ ನೀಡಬೇಕು ಎಂಬ ಮೆಹಬೂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸೇಥಿ, ಆಗಿನ ಪರಿಸ್ಥಿತಿ ಮತ್ತು ಈಗ ಇರುವ ಪರಿಸ್ಥಿತಿಗೆ ಬಹಳಷ್ಟು ವ್ಯತ್ಯಾಸವಿದೆ ಎಂದರು. ಕಾಶ್ಮೀರದಲ್ಲಿ ಸೇನೆಯ ಕಾರ್ಯಾಚರಣೆಯಿಂದ ಭಯೋತ್ಪಾದಕರ ನೈತಿಕ ಸ್ಥೈರ್ಯ ಉಡುಗಿದೆ. ಏಕಪಕ್ಷೀಯ ಕದನ ವಿರಾಮದಿಂದ ಅವರ ಮೇಲಿನ ಒತ್ತಡ ದೂರವಾಗಿ ಮರಳಿ ಸಂಘಟಿತರಾಗಲು ಅವರಿಗೆ ಕಾಲಾವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಪಟ್ಟಿಯಲ್ಲಿರುವ ಉಗ್ರರನ್ನು ಮಟ್ಟಹಾಕುವವರೆಗೆ ‘ಆಪರೇಷನ್ ಆಲ್‌ಔಟ್’ ಮುಂದುವರಿಯಬೇಕು ಎಂಬುದು ತಮ್ಮ ನಿಲುವಾಗಿದೆ ಎಂದವರು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಕಲ್ಲೆಸೆತದ ಘಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಕಾಶ್ಮೀರದ ಶೋಫಿಯಾನ್‌ನಿಂದ ಬಾರಮುಲ್ಲ ಪ್ರದೇಶ ವ್ಯಾಪ್ತಿಯಲ್ಲಿ ಕಲ್ಲೆಸೆತ ನಡೆಸುವ ಗುಂಪು ಸಕ್ರಿಯವಾಗಿದೆ. ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸುವ ಇವರು ಭದ್ರತಾ ಪಡೆಯವರನ್ನು ಗುರಿಯಾಗಿಸಿಕೊಂಡು ಕಲ್ಲೆಸೆಯುತ್ತಿದ್ದಾರೆ ಎಂದರು.







