ಮಂಡ್ಯ: ಜಿಲ್ಲೆಯ ವಿವಿಧೆಡೆ ರೋಡ್ ಶೋ ಮೂಲಕ ಬಿರುಸಿನ ಪ್ರಚಾರ
ಬಹಿರಂಗ ಪ್ರಚಾರಕ್ಕೆ ತೆರೆ

ಮಂಡ್ಯ, ಮೇ 10: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದ್ದು, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಮತ ಪ್ರಚಾರ, ರೋಡ್ ಶೋ ಹಾಗೂ ಬಹಿರಂಗ ಸಮಾವೇಶಗಳು ನಡೆದವು.
ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬಹಿರಂಗ ಸಭೆಯಲ್ಲಿ ಮಾತನಾಡಿದರೆ, ಜಿಲ್ಲೆಯ ವಿವಿಧ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ರೋಡ್ ಶೋ, ಮನೆಮನೆಗೆ ಭೇಟಿ ಮೂಲಕ ಮತಯಾಚಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಪರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ಇತರ ಮುಖಂಡರು ನಗರದ ಮುಸ್ಲಿಂ ಬ್ಲಾಕ್‍ನ ಆಜಾದ್ ನಗರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಣಿಗ ಮತ್ತು ಮುಡಾ ಅಧ್ಯಕ್ಷ ಮುನಾವರ್ ಖಾನ್ ಹಾಗೂ ಬೆಂಬಲಿಗರು ರೋಡ್ ಶೋ ಮೂಲಕ ಬಿರುಸಿನ ಪ್ರಚಾರ ನಡೆಸಿದರು.
ನಗರದ ವಕೀಲರ ಸಂಘದ ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ಚಂದಗಾಲು ಶಿವಣ್ಣ ಮತ್ತು ಬೆಂಬಲಿಗರು, ಜಬ್ಬಾರ್ ವೃತ್ತದಲ್ಲಿ ಬಿಜೆಪಿ ಉಸ್ತುವಾರಿ ಇ.ಅಶ್ವತ್ಥನಾಯಾರಣ್ ನೇತೃತ್ವದಲ್ಲಿ ಮತಯಾಚಿಸಲಾಯಿತು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಮುಖಂಡರು, ಬೆಂಬಲಿಗರ ಜತೆ ಪಾಂಡವಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು.
ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಕ್ಷೇತ್ರದ ಗೊರವನಹಳ್ಳಿ, ಚನ್ನಸಂದ್ರ, ಇನ್ನಿತರ ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು. ಮಾಜಿ ಶಾಸಕ ಬಿ.ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಗುರುಚರಣ್, ಪುರಸಭಾ ಮಾಜಿ ಅಧ್ಯಕ್ಷ ಅಮರ್‍ಬಾಬು ಇತರರು ಸಾಥ್ ನೀಡಿದರು.







