ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ದತೆ: ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ

ಮಂಡ್ಯ, ಮೇ 10: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.
ತನ್ನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 7 ಕ್ಷೇತ್ರಗಳಲ್ಲಿ 84 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,795 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 359 ಸೂಕ್ಷ್ಮ ಹಾಗೂ 90 ಅತಿಸೂಕ್ಷ್ಮ ಮತಗಟ್ಟೆಗಳಿವೆ ಎಂದರು.
130 ಮತಗಟ್ಟೆ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಲಾಗುತ್ತದೆ. ಅಲ್ಲದೆ ಕೇಂದ್ರ ಅರೆಸೇನಾ ತುಕಡಿ ನಿಯೋಜಿಸಲಾಗಿದೆ.
ಮತದಾನದ ಪ್ರಕ್ರಿಯೆಯಲ್ಲಿ ಒಬ್ಬ ಚುನಾವಣಾಧಿಕಾರಿ ಹಾಗೂ ಒಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಸುಮಾರು 10,395 ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯಾದ್ಯಂತ 22 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಎಲ್ಲ ಮತಗಟ್ಟೆಗಳಲ್ಲೂ ಮಹಿಳಾ ಸಿಬ್ಬಂದಿಗಳಿರುತ್ತಾರೆ. ವಿಶೇಷ ಚೇತನರಿಗಾಗಿ 8 ವಿಶೇಷ ಚೇತನ ಸಿಬ್ಬಂದಿಗಳ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷಚೇತನರು ಮತ ಚಲಾಯಿಸಲು ಅನುಕೂಲವಾಗುವಂತೆ ಗಾಲಿ ಕುರ್ಚಿಗಳ ಹಾಗೂ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 14,88,460 ಮತದಾರರಿದ್ದು, 13,23,307 ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಪ್ರತಿ ಮತಗಟ್ಟೆ ಕೇಂದ್ರ 100 ಮೀಟರ್ ಅಂತರದಲ್ಲಿ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಅವರ ಕ್ರಮಸಂಖ್ಯೆಯನ್ನು ಪರಿಶೀಲಿಸಿ ತಿಳಿಸುವ ಸಲುವಾಗಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಮೇ 15ರಂದು ಜಿಲ್ಲೆಯ ಎಲ್ಲ 7 ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆಯನ್ನು ಮಂಡ್ಯದ ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದಲ್ಲಿ ಮತ ಎಣಿಕೆ ನಡೆಯಲಿದೆ ಎಂದ ಅವರು, ಮತಗಳ ಎಣಿಕೆ ಏಜೆಂಟರ ನೇಮಕಾತಿಗಾಗಿ ಅಭ್ಯರ್ಥಿಗಳು ನಿಗದಿತ ಪ್ರಪತ್ರದಲ್ಲಿ ಏಜೆಂಟರ ಭಾವಚಿತ್ರದೊಂದಿಗೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಮೇ 13ರೊಳಗೆ ಅರ್ಜಿ ಸಲ್ಲಿಸಿ ಭಾವಚಿತ್ರವುಳ್ಳ ಎಣಿಕೆ ಏಜೆಂಟರ ಗುರುತಿನ ಚೀಟಿ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ವಿಜಯ್ ಹಾಗೂ ಜಿಪಂ ಸಿಇಒ ಬಿ.ಶರತ್ ಉಪಸ್ಥಿತರಿದ್ದರು.







