ಅಣೆಕಟ್ಟೆ ಒಡೆದು ಪ್ರವಾಹ: ಕನಿಷ್ಠ 41 ಸಾವು

ನೈರೋಬಿ (ಕೆನ್ಯ), ಮೇ 8: ಕೆನ್ಯದ ರಿಫ್ಟ್ ಕಣಿವೆಯಲ್ಲಿ ಅಣೆಕಟ್ಟೆಯೊಂದರ ದಂಡೆ ಒಡೆದಿದ್ದು, ಪ್ರವಾಹದಲ್ಲಿ 41 ಮಂದಿ ಮೃತಪಟ್ಟಿದ್ದಾರೆ ಹಾಗೂ ನೂರಾರು ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಬುಧವಾರ ರಾತ್ರಿ ನಕುರು ಕೌಂಟಿಯ ಸೊಲೈಯಲ್ಲಿರುವ ಪಟೇಲ್ ಅಣೆಕಟ್ಟೆಯ ದಂಡೆ ಒಡೆದಿದ್ದು, ನೀರು ಹೊರಗೆ ನುಗ್ಗಿದೆ. ಪ್ರವಾಹದಲ್ಲಿ ನೂರಾರು ಮನೆಗಳು ಕೊಚ್ಚಿ ಹೋಗಿವೆ.
‘‘ನಾವು 41 ಮೃತದೇಹಗಳನ್ನು ಪತ್ತೆಹಚ್ಚಿದ್ದೇವೆ. ಇನ್ನೂ ತುಂಬಾ ಮಂದಿ ನಾಪತ್ತೆಯಾಗಿದ್ದಾರೆ. ಇದೊಂದು ದೊಡ್ಡ ವಿಪತ್ತು’’ ಎಂದು ರೊಂಗೈ ಪೊಲೀಸ್ ಮುಖ್ಯಸ್ಥ ಜೋಸೆಫ್ ಕಿಯೋಕೊ ತಿಳಿಸಿದರು.
ಬಹುತೇಕ ಒಂದು ಇಡೀ ಗ್ರಾಮವೇ ನೀರು ಮತ್ತು ಕೆಸರಿನಲ್ಲಿ ಕೊಚ್ಚಿ ಹೋಗಿದೆ ಎಂದರು.
ಗುರುವಾರ ಬೆಳಗ್ಗೆ ಕೆನ್ಯ ರೆಡ್ ಕ್ರಾಸ್ ಮತ್ತು ನಕುರು ಕೌಂಟಿ ವಿಪತ್ತು ನಿರ್ವಹಣಾ ಘಟಕಗಳು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು 40 ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಲಾಗಿದೆ. ಇನ್ನೂ ಹಲವಾರು ಮಂದಿ ಕೆಸರಿನಡಿ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ.
ಅಣೆಕಟ್ಟೆಯಿಂದ ಹೊರಬಂದ ಕೆಸರು ಮತ್ತು ಮಣ್ಣು ಸುಮಾರು 2 ಕಿಲೋಮೀಟರ್ ತ್ರಿಜ್ಯದಲ್ಲಿರುವ ಮನೆಗಳನ್ನು ಕೊಚ್ಚಿಕೊಂಡು ಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.







