ಹಿಂಸಾ ತನಿಖಾ ವಿಧಾನವನ್ನು ಸಿಐಎ ಪುನರಾವರ್ತಿಸುವುದಿಲ್ಲ
ಅಮೆರಿಕ ಗುಪ್ತಚರ ಸಂಸ್ಥೆಯ ನಿಯೋಜಿತ ಮುಖ್ಯಸ್ಥೆ

ವಾಶಿಂಗ್ಟನ್, ಮೇ 10: ಕೈದಿಗಳಿಗೆ ಚಿತ್ರಹಿಂಸೆ ನೀಡುವ ಯಾವುದೇ ಕಾರ್ಯಕ್ರಮಗಳನ್ನು ಮರುಜಾರಿಗೊಳಿಸುವುದಿಲ್ಲ ಹಾಗೂ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುವ ಯಾವುದೇ ಅನೈತಿಕ ಆದೇಶಗಳನ್ನು ಜಾರಿಗೊಳಿಸುವುದಿಲ್ಲ ಎಂದು ಸಿಐಎ ಮುಖ್ಯಸ್ಥರ ಹುದ್ದೆಗೆ ಟ್ರಂಪ್‌ರ ಆಯ್ಕೆಯಾಗಿರುವ ಗಿನಾ ಹ್ಯಾಸ್ಪೆಲ್ ಅಮೆರಿಕದ ಸಂಸತ್ತಿಗೆ ಬುಧವಾರ ಭರವಸೆ ನೀಡಿದ್ದಾರೆ.
ಒಂದು ದಶಕಕ್ಕೂ ಹಿಂದಿನ ಅವಧಿಯಲ್ಲಿ ಜಾರ್ಜ್ ಡಬ್ಲು. ಬುಶ್ ಅಧ್ಯಕ್ಷರಾಗಿದ್ದಾಗ ಸಿಐಎ ‘ವಾಟರ್ ಬೋರ್ಡಿಂಗ್’ ಮುಂತಾದ ಕಠಿಣ ಚಿತ್ರಹಿಂಸೆ ವಿಧಾನಗಳನ್ನು ಅನುಸರಿಸಿತ್ತು. ಈ ಬಗ್ಗೆ ಸೆನೆಟ್ ಸದಸ್ಯರು ಹ್ಯಾಸ್ಪೆಲ್‌ರನ್ನು ಪದೇ ಪದೇ ಪ್ರಶ್ನಿಸಿದರು.
‘‘ಅಂದಿನ ಆ ವಿಪ್ಲವಕಾರಿ ಅವಧಿಯ ನನ್ನ ಅನುಭವದ ಹಿನ್ನೆಲೆಯಲ್ಲಿ, ಇನ್ನು ಮುಂದೆ ನನ್ನ ಉಸ್ತುವಾರಿಯಲ್ಲಿ ಅಂಥ ಬಂಧನ ಮತ್ತು ತನಿಖಾ ಕಾರ್ಯಕ್ರಮವನ್ನು ಸಿಐಎ ಪುನರಾವರ್ತಿಸುವುದಿಲ್ಲ ಎಂಬ ಭರವಸೆಯನ್ನು ನಾನು ನೀಡಲು ಬಯಸುತ್ತೇನೆ’’ ಎಂದು ಅವರು ಸೆನೆಟ್ ಇಂಟಲಿಜನ್ಸ್ ಸಮಿತಿಗೆ ಹೇಳಿದರು.
Next Story





