ರಿಷಬ್ ಪಂತ್ ಶತಕ ವ್ಯರ್ಥ: ಹೈದರಾಬಾದ್‌ಗೆ ಭರ್ಜರಿ ಜಯ

ಹೊಸದಿಲ್ಲಿ, ಮೇ 10: ಶಿಖರ್ ಧವನ್ ಹಾಗೂ ಕೇನ್ ವಿಲಿಯಮ್ಸನ್ ಸಾಹಸದ ನೆರವಿನಿಂದ ಐಪಿಎಲ್‌ನ 42ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಗುರುವಾರ ಇಲ್ಲಿ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಗೆಲ್ಲಲು 188 ರನ್ ಸವಾಲು ಪಡೆದ ಹೈದರಾಬಾದ್ ತಂಡ 18.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ಹೈದರಾಬಾದ್ ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಹೇಲ್ಸ್(14) ವಿಕೆಟ್ ಕಳೆದುಕೊಂಡಿತು. ಆಗ 2ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 176 ರನ್ ಜೊತೆಯಾಟ ನಡೆಸಿದ ಆರಂಭಿಕ ಆಟಗಾರ ಧವನ್(ಔಟಾಗದೆ 92,50 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ನಾಯಕ ವಿಲಿಯಮ್ಸನ್(ಔಟಾಗದೆ 83, 53 ಎಸೆತ, 8 ಬೌಂಡರಿ, 2 ಸಿಕ್ಸರ್)ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಡೆಲ್ಲಿ ತಂಡ ಧವನ್-ವಿಲಿಯಮ್ಸ್‌ರನ್ನು ಬೇರ್ಪಡಿಸಲು ಏಳು ಬೌಲರ್‌ಗಳನ್ನು ಬಳಸಿದರೂ ಯಾವುದೇ ಫಲ ಲಭಿಸಲಿಲ್ಲ. ಹರ್ಷಲ್ ಪಟೇಲ್(1-32) ಮಾತ್ರ ಒಂದು ವಿಕೆಟ್ ಪಡೆದರು.
ಡೆಲ್ಲಿ 187/5: ಇದಕ್ಕೆ ಮೊದಲು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ದಾಖಲಿಸಿದ ಚೊಚ್ಚಲ ಶತಕದ(ಔಟಾಗದೆ 128)ಸಹಾಯದಿಂದ ಡೆಲ್ಲಿ ತಂಡ ಹೈದರಾಬಾದ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಕಲೆ ಹಾಕಿತು.
ಟಾಸ್ ಜಯಿಸಿದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 7.4 ಓವರ್‌ಗಳಲ್ಲಿ 43 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿಯ ಆರಂಭ ಕಳಪೆಯಾಗಿತ್ತು.
ಆಗ ತಂಡಕ್ಕೆ ಆಸರೆಯಾದ ಪಂತ್(ಔಟಾಗದೆ 128, 63 ಎಸೆತ, 15 ಬೌಂಡರಿ,7 ಸಿಕ್ಸರ್) ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್ ದಾಳಿ ಹೊಂದಿರುವ ಹೈದರಾಬಾದ್ ತಂಡವನ್ನು ದಿಟ್ಟವಾಗಿ ಎದುರಿಸಿದರು.
ಏಕಾಂಗಿ ಹೋರಾಟ ನೀಡಿದ ಪಂತ್ ಡೆಲ್ಲಿ ತಂಡ 5 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಲು ನೆರವಾದರು. 4ನೇ ವಿಕೆಟ್‌ಗೆ ಹರ್ಷಲ್ ಪಟೇಲ್(24) ಅವರೊಂದಿಗೆ 55 ರನ್ ಜೊತೆಯಾಟ ನಡೆಸಿದ ಪಂತ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್‌ರೊಂದಿಗೆ 5ನೇ ವಿಕೆಟ್‌ಗೆ 65 ರನ್ ಸೇರಿಸಿ ತಂಡದ ಸ್ಕೋರ್ ಹಿಗ್ಗಿಸಲು ನೆರವಾದರು.
ಹೈದರಾಬಾದ್ ಪರ ಶಾಕಿಬ್ ಅಲ್ ಹಸನ್ (2-27)ಯಶಸ್ವಿ ಬೌಲರ್ ಎನಿಸಿಕೊಂಡರು. ಹಸನ್ 4ನೇ ಓವರ್‌ನ ಸತತ ಎಸೆತಗಳಲ್ಲಿ ಆರಂಭಿಕ ಆಟಗಾರ ಪೃಥ್ವಿ ಶಾ(9) ಹಾಗೂ ಜೇಸನ್ ರಾಯ್(11) ವಿಕೆಟ್‌ನ್ನು ಉರುಳಿಸಿದರು. ಆಗ ಡೆಲ್ಲಿಯ ಸ್ಕೋರ್ 21ಕ್ಕೆ 2.
6ನೇ ಓವರ್‌ನಲ್ಲಿ ಸಿದ್ದಾರ್ಥ್ ಕೌಲ್ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ಪಂತ್, 12ನೇ ಓವರ್‌ನಲ್ಲಿ ಸ್ಪಿನ್ನರ್ ರಶೀದ್ ಖಾನ್ ವಿರುದ್ಧ ಸಿಡಿದೆದ್ದರು. ಡೆಲ್ಲಿ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 52 ರನ್ ಗಳಿಸಿತ್ತು. ಪಂತ್ ಪವರ್‌ಫುಲ್ ಬ್ಯಾಟಿಂಗ್ ಪಂದ್ಯದ ದಿಕ್ಕನ್ನು ಬದಲಿಸಿತು.
ಶಾಕಿಬ್ ಎಸೆತದಲ್ಲಿ ಸಿಕ್ಸರ್ ಸಿಡಿಸುವುದರೊಂದಿಗೆ 50 ರನ್ ಪೂರೈಸಿದ ಪಂತ್ ಕೌಲ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ 100 ರನ್ ಪೂರ್ಣಗೊಳಿಸಿದರು.
ಸಂಕ್ಷಿಪ್ತ ಸ್ಕೋರ್
ಡೆಲ್ಲಿ ಡೇರ್ ಡೆವಿಲ್ಸ್: 20 ಓವರ್‌ಗಳಲ್ಲಿ 187/5
(ಪಂತ್ ಔಟಾಗದೆ 128,ಪಟೇಲ್ 24, ಹಸನ್ 2-27)
ಸನ್‌ರೈಸರ್ಸ್ ಹೈದರಾಬಾದ್: 18.5 ಓವರ್‌ಗಳಲ್ಲಿ 191/1
(ಶಿಖರ್ ಧವನ್ ಔಟಾಗದೆ 92, ವಿಲಿಯಮ್ಸನ್ ಔಟಾಗದೆ 83)







