ಜೀವಭಯವಿದೆ, ನನ್ನ ಸಾಕ್ಷ್ಯ ಶೀಘ್ರ ದಾಖಲಿಸಿ: ಸಿಬಿಐ ಕೋರ್ಟಿಗೆ ಸೊಹ್ರಾಬುದ್ದೀನ್ ಸೋದರನ ಮನವಿ

ಮುಂಬೈ, ಮೇ 11: ತನಗೆ ಜೀವ ಬೆದರಿಕೆಯಿರುವುದರಿಂದ ತನ್ನ ಸೋದರ ಸೊಹ್ರಾಬುದ್ದೀನ್ ಶೇಖ್ `ನಕಲಿ' ಎನ್‍ಕೌಂಟರ್ ಪ್ರಕರಣದಲ್ಲಿ ತನ್ನ ಸಾಕ್ಷ್ಯ ದಾಖಲಿಕೆಯನ್ನು ಶೀಘ್ರ ನಡೆಸಬೇಕೆಂದು ಸೊಹ್ರಾಬುದ್ದೀನ್ ಸಹೋದರ ಶಾನವಾಝುದ್ದೀನ್ ಶೇಖ್ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ.
ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಪ್ರಭಾವಿ ರಾಜಕಾರಣಿಗಳು ಶಾನವಾಝುದ್ದೀನ್ ಮೇಲೆ ಸತತ ನಿಗಾ ಇರಿಸಿರುವುದರಿಂದ ಅವರು ಈ ಮನವಿ ಮಾಡಿದ್ದಾರೆಂದು ಅವರು ನ್ಯಾಯಾಲಯದೆದುರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಓರ್ವ ಸಾಕ್ಷಿಯಾಗಿ ಸಿಬಿಐ ತನ್ನ ಹೆಸರನ್ನು ಸೇರ್ಪಡೆಗೊಳಿಸದೇ ಇರುವುದನ್ನು ಅರಿತು ಹಾಗೂ ತನ್ನಿಂದ ವಶಪಡಿಸಿಕೊಳ್ಳಲಾದ ಕೆಲವೊಂದು ಸಾಕ್ಷ್ಯಗಳನ್ನು ಹಾಜರುಪಡಿಸಿಲ್ಲ ಎಂದು ತಿಳಿದ ನಂತರ ಶಾನವಾಝುದ್ದೀನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತುಳಸೀರಾಂ ಪ್ರಜಾಪತಿ ಸಹಿ ಹಾಕಿದ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಸೊಹ್ರಾಬುದ್ದೀನ್ ಸಹವರ್ತಿಯಾಗಿದ್ದ ಪ್ರಜಾಪತಿ 2006ರಲ್ಲಿ ಎನ್ ಕೌಂಟರ್ ಒಂದರಲ್ಲಿ ಹತನಾಗಿದ್ದ.
ಸೊಹ್ರಾಬುದ್ದೀನ್ ಶೇಖ್ ಮತ್ತವರ ಪತ್ನಿ ಕೌಸರ್ ಬೀ ಅಪಹರಣ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪ್ರಜಾಪತಿಗೆ ಪ್ರಾಣಭಯವಿತ್ತು ಎಂದು ಶಾನವಾಝುದ್ದೀನ್ ಹೇಳಿದ್ದಾರೆ. ಆತನ ಅಪೀಲಿಗೆ ಉತ್ತರಿಸುವಂತೆ ಸಿಬಿಐ ನ್ಯಾಯಾಲಯ ಪ್ರಾಸಿಕ್ಯೂಶನ್ ಗೆ ಹೇಳಿದೆ. ಮುಂದಿನ ವಾರ ವಿಚಾರಣೆ ಆರಂಭಗೊಳ್ಳಲಿದೆ.







