ವಿದ್ಯುತ್ ಬಿಲ್ ನೋಡಿ ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ

ಔರಂಗಾಬಾದ್, ಮೇ 11: ವಿದ್ಯುತ್ ಬಿಲ್ ನೋಡಿ ಆಘಾತಗೊಂಡ ತರಕಾರಿ ವ್ಯಾಪಾರಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಭರತ್ ನಗರದಲ್ಲಿ ಗುರುವಾರ ನಡೆದಿದೆ.
ಜಗನ್ನಾಥ ಶೆಲ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ತರಕಾರಿ ವ್ಯಾಪಾರಿ.
ಜಗನ್ನಾಥ್ ಶೆಲ್ಕೆ ಎರಡು ಕೊಠಡಿಗಳ ಸಣ್ಣ ಮನೆಯಲ್ಲಿ ಕಳೆದ 20 ವರ್ಷಗಳಿಂದ ನೆಲೆಸಿದ್ದಾರೆ. ಆದರೆ ಅವರಿಗೆ ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಪ್ರಸರಣಾ ಸಂಸ್ಥೆ (ಎಂಎಸ್ ಇಡಿಸಿಎಲ್)ಯಿಂದ 55,519 ಯುನಿಟ್ ಬಳಕೆ ಮಾಡಿದಕ್ಕಾಗಿ 8, 64,781 ರೂ. ಮೊತ್ತದ ಬಿಲ್ ಕಳುಹಿಸಿತ್ತು. ಇದರಿಂದ ಆಘಾತಗೊಂಡಿದ್ದ ಜಗನ್ನಾಥ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ ನೋಟ್ ನಲ್ಲಿ ವಿದ್ಯುತ್ ಬಿಲ್ ನ್ನು ನೋಡಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ. ಜಗನ್ನಾಥ ಶೆಲ್ಕೆ ಅವರ ಮನೆಯ ಮೀಟರ್ ಸರಿ ಇರಲಿಲ್ಲ ಎನ್ನಲಾಗಿದೆ. ವಿದ್ಯುತ್ ಮೀಟರ್ ಬದಲಾಯಿಸಿದ್ದರೂ ಫಲಕಾರಿಯಾಗಲಿಲ್ಲ. ತಪ್ಪು ಬಿಲ್ ಕಳುಹಿಸಿದ ವಿದ್ಯುತ್ ಕಂಪೆನಿಯ ಗುಮಾಸ್ತನನ್ನು ವಜಾಗೊಳಿಸಲಾಗದೆ ಎಂದು ಸೆಕ್ಷನ್ ಎಂಜಿನಿಯರ್ ಗರ್ಕೆಡಾ ತಿಳಿಸಿದ್ದಾರೆ.
ಗಾರ್‌ಖೇಡ ಸ್ಟೇಶನ್‌ನ ಸೆಕ್ಷನ್ ಇಂಜಿನಿಯರ್ ಅವರು 6,117.8 ಕೆಡಬ್ಲ್ಯುಎಚ್ ಬದಲಿಗೆ 61,1478 ಕೆಡಬ್ಲ್ಯು ಎಚ್ ಮೀಟರ್ ರೀಡಿಂಗ್ ಪಂಚ್ ಮಾಡಲಾಗಿತ್ತು. ಪರಿಣಾಮವಾಗಿ ಶೇಳ್ಕೆಗೆ ಮಾರ್ಚ್ ತಿಂಗಳಿಗೆ 8.6 ಲಕ್ಷ ರೂ. ವಿದ್ಯುತ್ ಬಿಲ್ ಜಾರಿಯಾಗಿತ್ತು.
ಶೇಳ್ಕೆ ಅವರ ವಿದ್ಯುತ್ ಮೀಟರ್ ಅನ್ನು ಈ ವರ್ಷ ಜನವರಿ 10ರಂದು ಬದಲಾಯಿಸಲಾಗಿತ್ತು. ಮೀಟರ್ ದೋಷಯುಕ್ತವಾಗಿರುವುದರಿಂದ ಹೀಗಾಗಿರಬಹುದು ಎಂದು ವಿದ್ಯುತ್ ಕಂಪೆನಿ ಹೇಳಿದೆ.
ಪಂಡಲೀಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







