ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಬಿಜೆಪಿ ಶಾಸಕ ಸೇಂಗರ್ ಪತ್ನಿಯಿಂದ 1 ಕೋಟಿ ಬೇಡಿಕೆಯಿರಿಸಿದ ಇಬ್ಬರ ಬಂಧನ
ಉನ್ನಾವೋ ಅತ್ಯಾಚಾರ ಪ್ರಕರಣ

ಕುಲದೀಪ್ ಸಿಂಗ್ ಸೇಂಗರ್
ಲಕ್ನೋ,ಮೇ.11: ತಾವು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇಂಗರ್ ಪತ್ನಿ ಸಂಗೀತಾ ಬಳಿ ಬಂದ ಇಬ್ಬರು ತಮಗೆ ಒಂದು ಕೋಟಿ ರೂ. ನೀಡಿದರೆ ಆಕೆಯ ಗಂಡನಿಗೆ ಕ್ಲೀನ್ ಚಿಟ್ ನೀಡುವುದಾಗಿ ಹೇಳಿದ ಘಟನೆ ನಡೆದಿದ್ದು ಇಬ್ಬರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಅಲೋಕ್ ದ್ವಿವೇದಿ ಹಾಗೂ ವಿಜಯ್ ರಾವತ್ ಎಂಬವರನ್ನು ಗಝೀಪುರ್ ಪೊಲೀಸರು ಗೊಸಾಯಿಗಂಜ್ ಎಂಬಲ್ಲಿಂದ ಬಂಧಿಸಿದ್ದಾರೆ. ಇಬ್ಬರೂ ತಮ್ಮ ತಪ್ಪೊಪ್ಪಿಕೊಂಡಿದ್ದಾರೆನ್ನಲಾಗಿದೆ.
ಜಿಲ್ಲಾ ಪಂಚಾಯತ್ ಸದಸ್ಯೆಯಾಗಿರುವ ಸೇಂಗರ್ ಪತ್ನಿ ಸಂಗೀತಾ ಸಿಂಗ್ ದಾಖಲಿಸಿದ್ದ ದೂರಿನನ್ವಯ ಇಬ್ಬರನ್ನೂ ಬಂಧಿಸಲಾಗಿದೆ. ಇಬ್ಬರೂ ಆಕೆಗೆ ಕರೆ ಮಾಡಿ ಒಂದು ಕೋಟಿ ಬೇಡಿಕೆಯಿಟ್ಟಿದ್ದರೆಂದು ಆಕೆ ದೂರಿದ್ದಾರೆ. ದ್ವಿವೇದಿ ತನ್ನನ್ನು ಬಿಜೆಪಿ ನಾಯಕನೆಂದು ಪರಿಚಯಿಸಿದರೆ ಇನ್ನೊಬ್ಬಾತ ತಾನು ಹಿರಿಯ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡಿದ್ದ.
ದ್ವಿವೇದಿ ತಾನು ಅವಧ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದಿದ್ದಾಗಿ ಹಾಗೂ ಪ್ರತಿಭಾವಂತನಾಗಿದ್ದೂ ಉದ್ಯೋಗ ದೊರಕಿಲ್ಲ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸೇಂಗರ್ ಕುಟುಂಬ ಶ್ರೀಮಂತವಾಗಿದ್ದರಿಂದ ಆತನ ಪತ್ನಿಯಿಂದ ಹಣ ಪಡೆಯಬಹುದೆಂದು ಯೋಚಿಸಿ ಹೀಗೆ ಮಾಡಿದ್ದಾಗಿ ದ್ವಿವೇದಿ ಹೇಳಿದ್ದಾನೆ. ಇಬ್ಬರೂ ಸೇಂಗರ್ ಪತ್ನಿಗೆ ಮೇ 5 ಹಾಗೂ 6ರಂದು ಕರೆ ಮಾಡಿದ್ದರು.







