ಮತದಾನಕ್ಕೆ 'ಗುಲಾಬಿ'ಯ ಆಕರ್ಷಣೆ..!
ಬೆಂಗಳೂರು, ಮೇ 11: ಮಹಿಳಾ ಮತದಾರರು ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸಲು ಹಾಗೂ ಅವರನ್ನು ಮತಗಟ್ಟೆಗೆ ಆಕರ್ಷಿಸಲು ಇದೇ ಮೊದಲ ಬಾರಿಗೆ ಪ್ರತಿ ಕ್ಷೇತ್ರಕ್ಕೊಂದರಂತೆ ರಾಜ್ಯದ 223 ಕ್ಷೇತ್ರಗಳಲ್ಲಿ ಒಟ್ಟು 600 ‘ಪಿಂಕ್’ ಮತಗಟ್ಟೆ ಸ್ಥಾಪಿಸಲಾಗಿದೆ.
ಈ ಪಿಂಕ್ ಮತಗಟ್ಟೆಗಳಲ್ಲಿ ಗುಲಾಬಿ ಬಣ್ಣವೇ ಆಕರ್ಷಣೆ. ಪಿಂಕ್ ಮತಗಟ್ಟೆಗಳನ್ನು ವಿಶೇಷ ರೀತಿಯಲ್ಲಿ ಸಿಂಗಾರ ಮಾಡಲಾಗಿದೆ. ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳನ್ನು ಗುರುತಿಸಿ ಪಿಂಕ್ ಮತಕೇಂದ್ರ ಸ್ಥಾಪಿಸಲಾಗಿದೆ. ಚುನಾವಣಾಧಿಕಾರಿ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲರೂ ಮಹಿಳೆಯರೇ ಆಗಿರುತ್ತಾರೆಂಬುದು ಪಿಂಕ್ ಮತಗಟ್ಟೆ ವೈಶಿಷ್ಟವಾಗಿದೆ.
ನಾಳೆ(ಮೇ 12) ಬೆಳಗ್ಗೆ 7ಗಂಟೆಯಿಂದ ಸಂಜೆ 6:30ರ ವರೆಗೆ ಮತದಾನ ನಡೆಯಲಿದ್ದು, ಮಹಿಳಾ ಮತದಾರರಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ಈ ಬಾರಿ ಮಹಿಳೆಯರಿಗಾಗಿ ಪಿಂಕ್ ಮತಗಟ್ಟೆಯ ವಿಶೇಷ ಸೌಲಭ್ಯ ಕಲ್ಪಿಸಿದೆ. ಆಯೋಗ ಪಿಂಕ್ ಮತಗಟ್ಟೆಗಳನ್ನು ವಿಶೇಷವಾಗಿ ರೂಪಿಸುವ ಸಿದ್ದತೆಗಳನ್ನು ಪೂರ್ಣಗೊಳಿಸಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೀದರ್, ಕಲಬುರ್ಗಿ ಸೇರಿ 223 ಕ್ಷೇತ್ರಗಳಲ್ಲಿ ಪ್ರತೀಕ್ಷೇತ್ರಕ್ಕೆ ಒಂದರಂತೆ ಜಿಲ್ಲೆಯ ಮಹಿಳಾ ಮತದಾರರ ಸಂಖ್ಯೆಯನ್ನು ಆಧರಿಸಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಯಂತ್ರಗಳ ಜೊತೆ ಮಹಿಳಾ ಸಿಬ್ಬಂದಿ ನಿನ್ನೆ ರಾತ್ರಿಯೇ ಮತಗಟ್ಟೆಯಲ್ಲಿ ಬೀಡುಬಿಟ್ಟಿದ್ದು, ನಾಳೆ ಬೆಳಗ್ಗೆ ಮತದಾನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಿದ್ದಾರೆ.
ವಿವಿ ಪ್ಯಾಟ್: ವಿದ್ಯುನ್ಮಾನ ಮತಯಂತ್ರದ ಬಗ್ಗೆ ಕೆಲ ರಾಜಕೀಯ ಪಕ್ಷಗಳು ಸಂದೇಹಗಳನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ನಾಳೆ (ಮೇ 12) ಜರುಗಲಿರುವ ಮತದಾನದ ಸಂದರ್ಭದಲ್ಲಿ ವಿವಿಪ್ಯಾಟ್ ಬಳಕೆ ಮಾಡಲಿದೆ.
ಪ್ರತಿಯೊಬ್ಬ ಮತದಾರರು ತಾವು ಚಲಾಯಿಸಿದ ಮತ ನಿರ್ದಿಷ್ಟ ಚಿಹ್ನೆಗೆ ಬಿದ್ದಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿವಿಪ್ಯಾಟ್ ಯಂತ್ರದಲ್ಲಿ 6 ಸೆಕೆಂಡ್‌ಗಳ ಕಾಲ ವೀಕ್ಷಿಸಬಹುದಾಗಿದೆ. ಲೋಪ ಕಂಡುಬಂದರೆ ಮತದಾರರು ಸ್ಥಳದಲ್ಲೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.
ಮತದಾರ ಚಲಾಯಿಸಿದ ಮತವು ಮತಯಂತ್ರದಲ್ಲಿ ದಾಖಲಾಗುವುದರ ಜತೆಗೆ ವಿವಿಪ್ಯಾಟ್‌ನಲ್ಲಿ ಮುದ್ರಿತವಾಗಿ ಸಂಗ್ರಹವಾಗುತ್ತದೆ. ಮತ ಎಣಿಕೆ ದಿನ ಪ್ರತಿ ಕ್ಷೇತ್ರದ ಮತಗಟ್ಟೆಯ ವಿವಿಪ್ಯಾಟ್ ಯಂತ್ರದಲ್ಲಿನ ಮತಗಳನ್ನು ಮತ್ತು ವಿದ್ಯುನ್ಮಾನ ಮತಯಂತ್ರದ ಮತಗಳನ್ನು ಹೋಲಿಕೆ ಮಾಡಿ ಖಾತ್ರಿಪಡಿಸಿಕೊಳ್ಳಲಾಗುತ್ತದೆ.







