‘ಮತದಾನ ಮಾಡಿದರೆ ಸೇವೆಗಳಲ್ಲಿ ರಿಯಾಯಿತಿ’

ಬೆಂಗಳೂರು, ಮೇ 11: ರಾಜಧಾನಿ ಬೆಂಗಳೂರಿನ ಕೆಲವು ಖಾಸಗಿ ಸಂಸ್ಥೆಗಳು ಮೇ 12 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವವರಿಗೆ ತಮ್ಮ ತಮ್ಮ ಸಂಸ್ಥೆಗಳಲ್ಲಿ ನೀಡುವ ಸೇವೆಗಳಲ್ಲಿ ರಿಯಾಯಿತಿ-ವಿನಾಯಿತಿಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿವೆ.
ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜು ಬಳಿಯ ಹೊಟೇಲ್ ಒಂದರಲ್ಲಿ ಮತ ಚಲಾವಣೆ ಮಾಡಿದವರಿಗೆ 20ರೂ.ಗೆ ಮಸಾಲೆ ದೋಸೆ ನೀಡುವುದಾಗಿ ಫಲಕ ಅಳವಡಿಸಿದ್ದಾರೆ. ಇನ್ನು, ನಗರದ ಕೆಲವು ಹೊಟೇಲ್‌ಗಳು ಹಲವು ವಿನಾಯಿತಿಗಳನ್ನು ನೀಡುವ ಮೂಲಕ ಮತದಾನ ಜಾಗೃತಿಯಲ್ಲಿ ತೊಡಗಿವೆ. ಮತದಾನ ಮಾಡಿದವರಿಗೆ ಉಚಿತ ಕಾಫಿ ನೀಡುವುದಾಗಿ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೊಟೇಲ್ ಘೋಷಣೆ ಮಾಡಿದೆ.
ನಗರದ ಚಾಮರಾಜಪೇಟೆಯ ಬೃಂದಾವನ ಆಸ್ಪತ್ರೆಯು ಮತದಾನ ಮಾಡಿದವರಿಗೆ ತಪಾಸಣೆ ಹಾಗೂ ಪ್ರಯೋಗಾಲಯದ ವೆಚ್ಚದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಘೋಷಿಸಿದ್ದು, ನಾಳೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರು ಮತದಾನದ ಗುರುತು ತೋರಿಸಿದರೆ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ನೀಡಲು ಮುಂದಾಗಿದೆ.
ಜೊತೆಗೆ ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಎಕ್ಸ್-ರೇ ಅಲ್ಟ್ರಾಸೌಂಡ್, ಇತರೆ ಪರೀಕ್ಷೆಗಳ ವೆಚ್ಚದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮತದಾನದ ಗುರುತಿನ ಚೀಟಿ ಇಲ್ಲದವರು ಚುನಾವಣಾ ಆಯೋಗ ನಿಗಧಿಪಡಿಸಿರುವ ದಾಖಲೆ ತೋರಿಸಿ ರಿಯಾಯಿತಿ ಪಡೆಯಬಹುದಾಗಿದೆ.







