160 ಕೋಟಿ ರೂ.ಡೀಲ್ ಆರೋಪದ ಕುರಿತು ಶ್ರೀರಾಮುಲು ಹೇಳಿದ್ದೇನು ?

ಬಳ್ಳಾರಿ, ಮೇ 11: ಓಬಳಾಪುರಂ ಗಣಿ ಕಂಪೆನಿ ವಿಚಾರದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಪರವಾಗಿ ತೀರ್ಪು ನೀಡಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಳಿಯನ ಜೊತೆ ಏರ್ಪಟ್ಟಿದ್ದು ಎನ್ನಲಾದ 160 ಕೋಟಿ ರೂ.ಡೀಲ್ ಪ್ರಕರಣಕ್ಕೂ ನನಗೂ ಯಾವುದೆ ಸಂಬಂಧವಿಲ್ಲ ಎಂದು ಸಂಸದ ಬಿ.ಶ್ರೀರಾಮುಲು ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಭೇಟಿ ಮಾಡಲು ಯಾರು ಯಾರೋ ಬರುತ್ತಿರುತ್ತಾರೆ. ಏನೇನೋ ಮಾತನಾಡುತ್ತಿರುತ್ತಾರೆ. ಆದರೆ, ಈ 160 ಕೋಟಿ ರೂ.ಡೀಲ್ ವಿಚಾರದ ಕುರಿತು ನನಗೆ ಏನು ಗೊತ್ತಿಲ್ಲ ಎಂದರು.
ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ 2 ಕೋಟಿ ರೂ.ನಗದು ಪತ್ತೆಯಾಗಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷದ ಪರವಾಗಿ ಅಲೆ ಇದೆ. ಸ್ಪಷ್ಟ ಬಹುಮತದೊಂದಿಗೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬದಾಮಿಯಲ್ಲಿ ನಿನ್ನೆ ನಡೆಸಿದ ರೋಡ್ ಶೋದಲ್ಲಿ ಸೇರಿದ್ದ ಅಪಾರ ಜನಸ್ತೋಮ ನೋಡಿದರೆ ಇದೊಂದು ಐತಿಹಾಸಿಕ ಕ್ಷಣವಾಗಲಿದೆ. 140ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ರಾಮುಲು ಹೇಳಿದರು.







