‘ಎಪ್ಪತ್ತು ವರ್ಷಗಳಿಂದ ಇಲ್ಲೆ ಇದ್ದಿರೋ ಸೂ..ಮಕ್ಕಳೇ’
ಬಿಜೆಪಿ ಮುಖಂಡನಿಂದ ಚಿಕ್ಕೋಡಿಯಲ್ಲಿ ದಲಿತರ ಅವಹೇಳನ

ಬೆಳಗಾವಿ, ಮೇ 11: ‘ಎಪ್ಪತ್ತು ವರ್ಷಗಳಿಂದ ಇಲ್ಲೆ ಇದ್ದಿರೋ ಸೂ..ಮಕ್ಕಳೇ, ನಿಮೌ..ನ್ ನೀವು ಮೇಲೆ ಬಂದಿಲ್ಲ. ಶಿಕ್ಷಣ ಪಡೆದು ಕೇರಿ ಬಿಟ್ಟು, ದೊಡ್ಡ ನೌಕರಿ ಹಿಡಿದು ಬೇರೆ ಕಡೆ ಮನೆ ಮಾಡುವ ದಲಿತರು ಅವಮಾನವೆಂದು ತಮ್ಮ ಹೆಸರುಗಳನ್ನು ಬದಲಾವಣೆ ಮಾಡಿಕೊಳ್ತಾರೆ’ ಎಂದು ಪರಿಷತ್ ಬಿಜೆಪಿ ಸದಸ್ಯ ಮಹಾಂತೇಶ್ ಕವಟಗಿಮಠ ಅವರ ಸಹೋದರ ಜಗದೀಶ್ ಕವಟಗಿ ಮಠ ದಲಿತರನ್ನು ಅತ್ಯಂತ ತುಚ್ಛವಾಗಿ ಅವಹೇಳನ ಮಾಡಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಸಂಸ್ಥೆಯಲ್ಲಿ ‘ಲಿಂಗಾಯತ- ವೀರಶೈವ’ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ನೀಚ ಪದಗಳಿಂದ ದಲಿತರನ್ನು ಹೀಯಾಳಿಸಿದರು ಎಂದು ತಿಳಿದು ಬಂದಿದೆ.
ಚಿಕ್ಕೋಡಿ ಪುರಸಭೆಯ ಮಾಜಿ ಅಧ್ಯಕ್ಷರೂ ಆಗಿದ್ದ ಜಗದೀಶ್ ಕವಟಗಿ ಮಠ, ‘ಶಿಕ್ಷಣ ಪಡೆದು ದಲಿತರು ದೊಡ್ಡ ನೌಕರಿ ಸಿಕ್ಕ ಕೂಡಲೇ ಕೇರಿಯನ್ನು ಬಿಡುತ್ತಾರೆ. ಜತೆಗೆ ತಮ್ಮ ಹೆಸರಿನ ಮುಂದಿನ ಸರ್ ನೇಮ್‌ಗಳನ್ನು ಕುಲಕರ್ಣಿ, ಪಟವರ್ಧನ್, ಸರದೇಶಪಾಂಡೆ ಎಂದು ಬದಲಾಯಿಸಿಕೊಳುತ್ತಾರೆ’ ಎಂದು ಅಸಮಾಧಾನಪಟ್ಟರು.
‘ದಲಿತರು ಕಾಂಬ್ಳೆ ಸೇರಿದಂತೆ ಇನ್ನಿತರ ಅಡ್ಡ ಹೆಸರುಗಳು ತಮಗೆ ಅವಮಾನ ಎಂದು ಭಾವಿಸುತ್ತಾರೆ. ಆದರೆ, ನನ್ನ ಮನೆಯಲ್ಲಿ ಅಡುಗೆ ಮಾಡಲಿಕ್ಕೆ ದಲಿತರನ್ನೇ ಇಟ್ಟುಕೊಂಡಿದ್ದೇನೆ’ ಎಂದು ಹೇಳಿದರು.
ಪಾಟೀಲ್ ಪತ್ರ: ರಾಜ್ಯದಲ್ಲಿ ವೀರಶೈವ ಲಿಂಗಾಯತ ಧರ್ಮ ಪ್ರತ್ಯೇಕ ಆಗುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಾಂಗ್ರೆಸ್ ಪಕ್ಷದ ನಾಯಕ ಸೋನಿಯಾ ಗಾಂಧಿಗೆ 2017ರ ಜುಲೈನಲ್ಲಿ ಬರೆದಿದ್ದಾರೆನ್ನಲಾದ ಪತ್ರದ ಕುರಿತು ಜಗದೀಶ್ ಸುದ್ದಿಗೋಷ್ಠಿ ಕರೆದಿದ್ದರು. ಇದೇ ವೇಳೆ ಪಾಟೀಲ್ ಅವರು ಬರೆದಿದ್ದು ಎನ್ನಲಾದ ಪತ್ರವನ್ನು ಬಿಡುಗಡೆ ಮಾಡಿದರು. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಿದರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಹೀಗೆ ಮಾಡಿದರೆ ದಲಿತರು ಮತ್ತು ಕ್ರೈಸ್ತರು ಸೇರಿ ವಿವಿಧ ಧರ್ಮದ ಜನ ನಮ್ಮತ್ತ ಬರುತ್ತಾರೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.







