ಅತ್ಯಾಚಾರ ಸಂತ್ರಸ್ಥೆ, ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಗ್ರಾಮ ಪಂಚಾಯತ್!

ಚಿತ್ತೋಡಗಢ(ರಾಜಸ್ಥಾನ),ಮೇ 11: ಚಿತ್ತೋಡಗಢ ಜಿಲ್ಲೆಯಲ್ಲಿ ಕಳೆದ ವರ್ಷ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಮತ್ತು ಆಕೆಯ ಕುಟುಂಬ ಕಳೆದ ಕೆಲವು ತಿಂಗಳುಗಳಿಂದ ಗ್ರಾಮಸ್ಥರಿಂದ ಬಹಿಷ್ಕಾರವನ್ನು ಎದುರಿಸುತ್ತಿದೆ. ಈ ಕುಟುಂಬಕ್ಕೆ ತರಕಾರಿಗಳನ್ನು ಅಥವಾ ಗ್ರಾಮದ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಯುವತಿಯ ಸಂಬಂಧಿಯೋರ್ವ ಅನಾರೋಗ್ಯದಿಂದಾಗಿ ವೈದ್ಯರ ಬಳಿ ತೆರಳಿದ್ದಾಗ ಅವರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಇಷ್ಟೇಕೆ,ಕುಟುಂಬದವರಿಗೆ ಕ್ಷೌರ ಮಾಡಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಗಿರಣಿಯಲ್ಲಿ ಗೋಧಿಯನ್ನೂ ಹಿಟ್ಟು ಮಾಡಿ ಕೊಡುತ್ತಿಲ್ಲ.
ನ್ಯಾಯಾಲಯದಲ್ಲಿ ಅತ್ಯಾಚಾರಿಯ ವಿರುದ್ಧದ ಹೇಳಿಕೆಯನ್ನು ಬದಲಿಸಲು ಯುವತಿ ನಿರಾಕರಿಸಿದ ಬಳಿಕ ತಮ್ಮನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ ಎಂದು ಕುಟುಂಬವು ಆರೋಪಿಸಿದೆ. ಸಮುದಾಯವು ಈ ಕುಟುಂಬಕ್ಕೆ ಯಾವುದೇ ನೆರವನ್ನು ನೀಡದಂತೆ ಪಂಚಾಯತ್ ಆದೇಶಿಸಿದೆ.
ಗ್ರಾಮದ ನಿವಾಸಿಯೋರ್ವ ಯುವತಿಗೆ ಮತ್ತು ಬರಿಸುವ ಔಷಧಿಯನ್ನು ನೀಡಿ ಅತ್ಯಾಚಾರವೆಸಗಿದ್ದಲ್ಲದೆ,ವೀಡಿಯೊದಲ್ಲಿ ಸೆರೆ ಹಿಡಿದು ಬೆದರಿಕೆಯೊಡ್ಡಿದ್ದ. ಈ ಬಗ್ಗೆ ಯುವತಿ ಪೊಲೀಸ್ ದೂರು ಸಲ್ಲಿಸಿದ್ದಳು.
ತನ್ನ ಹೇಳಿಕೆಯನ್ನು ಬದಲಿಸುವಂತೆ ಮತ್ತು ಆರೋಪಿಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ನಿಮ್ಮ ಮಗಳಿಗೆ ಬುದ್ಧಿ ಹೇಳಿ,ಇಲ್ಲದಿದ್ದರೆ ನಿಮ್ಮನ್ನು ಗ್ರಾಮದಿಂದ ಹೊರಗೆ ಹಾಕಲಾಗುವದು ಎಂದು ಪಂಚಾಯತ್ ಮುಖಂಡರು ತನ್ನ ಹೆತ್ತವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ. 11,000 ರೂ. ದಂಡವನ್ನು ಪಾವತಿಸುವಂತೆ ತನ್ನ ಕುಟುಂಬಕ್ಕೆ ಬಲವಂತ ಮಾಡಲಾಗುತ್ತಿದೆ ಎಂದೂ ಆಕೆ ಆರೋಪಿಸಿದ್ದಾಳೆ.
ಸಂತ್ರಸ್ತ ಕುಟುಂಬವು ಪಂಚಾಯತ್ ಆದೇಶದ ವಿರುದ್ಧ ಲಿಖಿತ ಪೊಲೀಸ್ ದೂರನ್ನು ಸಲ್ಲಿಸಿದೆ.







