ಸ್ವಚ್ಛ ಗಂಗಾ ನಿಧಿಗೆ ಒಂದು ತಿಂಗಳ ವೇತನ ದೇಣಿಗೆ ನೀಡುವಂತೆ ಪ್ರಧಾನಿ,ರಾಷ್ಟ್ರಪತಿಗೆ ಗಡ್ಕರಿ ಆಗ್ರಹ

ಹೊಸದಿಲ್ಲಿ,ಮೆ 11: ಗಂಗಾನದಿಯ ಶುದ್ಧೀಕರಣಕ್ಕಾಗಿ ಸಾರ್ವಜನಿರಿಂದ ಮತ್ತು ಸಂಸ್ಥೆಗಳಿಂದ ದೇಣಿಗೆಗಳನ್ನು ಸ್ವೀಕರಿಸಲು ಸರಕಾರವು ಸ್ಥಾಪಿಸಿರುವ ಸ್ವಚ್ಛ ಗಂಗಾ ನಿಧಿ(ಸಿಜಿಎಫ್)ಗೆ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡುವಂತೆ ಕೋರಿ ತಾನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ತಮ್ಮ ಒಂದು ತಿಂಗಳ ವೇತನಗಳನ್ನು ಸಿಜಿಎಫ್‌ಗೆ ದೇಣಿಗೆಯಾಗಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಸಚಿವರು,ಸಂಸದರು,ಶಾಸಕರು ಮತ್ತು ಸಾರ್ವಜನಿಕರನ್ನೂ ತಾನು ಆಗ್ರಹಿಸುವುದಾಗಿ ತಿಳಿಸಿದರು.
2014,ಸೆಪ್ಟೆಂಬರ್‌ನಲ್ಲಿ ಸ್ಥಾಪನೆಯಾದ ಬಳಿಕ ಸಿಜಿಎಫ್ ಮೂಲಕ ಸರಕಾರವು 250 ಕೋ.ರೂ.ಗಳ ದೇಣಿಗೆಗಳನ್ನು ಸ್ವೀಕರಿಸಿದೆ.
ಡಿಜಿಟಲ್ ವರ್ಗಾವಣೆಯ ಮೂಲಕ ತಮ್ಮಿಂದ ಸಾಧ್ಯವಿರುವಷ್ಟು ದೇಣಿಗೆಗಳನ್ನು ನೀಡಿ ಪ್ರತಿಯೊಬ್ಬರೂ ಗಂಗಾ ಶುದ್ಧೀಕರಣ ಆಂದೋಲನದಲ್ಲಿ ಭಾಗಿಗಳಾಗಬೇಕು ಎಂದು ಗಡ್ಕರಿ ತಿಳಿಸಿದರು.
‘ನಮಾಮಿ ಗಂಗೆ’ ಕಾರ್ಯಕ್ರಮಕ್ಕೆ ಹಣಕಾಸಿನ ಕೊರತೆಯಿಲ್ಲ,ಇದಕ್ಕಾಗಿ 20,000 ಕೋ.ರೂ.ವೆಚ್ಚಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ ಅವರು,ಸ್ನಾನಘಟ್ಟಗಳು ಮತ್ತು ರಸ್ತೆಗಳ ನಿರ್ಮಾಣ,ಬೆಳಕು ಮತ್ತು ಧ್ವನಿ ಕಾರ್ಯಕ್ರಮಗಳ ಆರಂಭ,ಪಾರ್ಕಿಂಗ್ ಸ್ಥಳದ ಅಭಿವೃದ್ಧಿ ಮತ್ತು ಇತರ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸರಕಾರವು ಈಗಾಗಲೇ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿದೆ ಎಂದರು. ಸಿಜಿಎಫ್‌ಗೆ ನೀಡುವ ದೇಣಿಗಗಳು ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಹೊಂದಿವೆ.







