ನ್ಯಾ ಕೆ.ಎಂ.ಜೋಸೆಫ್ ಪದೋನ್ನತಿಗೆ ಕೊಲಿಜಿಯಂ ಸಮ್ಮತಿ

ಹೊಸದಿಲ್ಲಿ, ಮೇ 11: ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಕೆ.ಎಂ.ಜೋಸೆಫ್‌ರನ್ನು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರನ್ನಾಗಿ ಮತ್ತೊಮ್ಮೆ ಶಿಫಾರಸು ಮಾಡಲು ಸುಪ್ರೀಂಕೋರ್ಟ್ ಕೊಲಿಜಿಯಂ ಸರ್ವಾನುಮತದಿಂದ ಸಮ್ಮತಿಸಿದೆ. ಅಲ್ಲದೆ ಇನ್ನೂ ಕೆಲವು ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಲು ಮೇ 16ರಂದು ಮತ್ತೆ ಸಭೆ ಸೇರಲು ನಿರ್ಧರಿಸಿದೆ.
ಈ ಮೊದಲು, ನ್ಯಾ. ಜೋಸೆಫ್ ಹೆಸರನ್ನು ಆಯ್ಕೆ ಮಾಡಿರುವ ಕ್ರಮವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ತಿಳಿಸಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಸ್ತಾವನೆಯನ್ನು ವಾಪಾಸು ಕಳಿಸಿದ್ದರು. ನ್ಯಾಯಾಧೀಶೆ ಇಂದು ಮಲ್ಹೋತ್ರರ ಹೆಸರನ್ನು ಶಿಫಾರ ಮಾಡಿರುವುದನ್ನು ಒಪ್ಪಿದ್ದ ಸರಕಾರ, ನ್ಯಾ. ಜೋಸೆಫ್ ಪದೋನ್ನತಿಗೆ ಅರ್ಹರಾಗುವಷ್ಟು ಸೇವಾ ಹಿರಿತನ ಹೊಂದಿಲ್ಲ ಎಂದು ತಿಳಿಸಿ ಅವರ ಹೆಸರನ್ನು ತಿರಸ್ಕರಿಸಿತ್ತು. ಅಲ್ಲದೆ ನ್ಯಾ. ಜೋಸೆಫ್ ಕೇರಳ ರಾಜ್ಯದವರು. ಈ ರಾಜ್ಯದ ಪ್ರತಿನಿಧಿ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಇದ್ದಾರೆ ಎಂದು ಸರಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಜೆ.ಚೆಲಮೇಶ್ವರ್, ರಂಜನ್ ಗೊಗೊಯ್, ಎಂ.ಬಿ.ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರನ್ನೊಳಗೊಂಡಿರುವ ಸುಪ್ರೀಂಕೋರ್ಟ್ ಕೊಲಿಜಿಯಂ ಇಂದು ಸುಮಾರು ಒಂದು ಗಂಟೆ ಚರ್ಚಿಸಿದ ಬಳಿಕ , ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿಗೆ ಶಿಫಾರಸು ಮಾಡಿರುವ ನ್ಯಾಯಾಧೀಶರ ಪಟ್ಟಿಯಲ್ಲಿ ನ್ಯಾ. ಜೋಸೆಫ್ ಹೆಸರನ್ನು ಸೇರಿಸಲು ಸರ್ವಾನುಮತದಿಂದ ಸಮ್ಮತಿಸಿದೆ. ಮುಖ್ಯ ನ್ಯಾಯಾಧೀಶರು ಹಾಗೂ ಕೊಲಿಜಿಯಂನ ಇತರ ಸದಸ್ಯರು , ನ್ಯಾ. ಕೆ.ಎಂ.ಜೋಸೆಫ್‌ರನ್ನು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸುವ ಬಗ್ಗೆ ಮತ್ತೊಮ್ಮೆ ಶಿಫಾರಸು ಮಾಡಲು ತಾತ್ವಿಕವಾಗಿ ಸಮ್ಮತಿಸಿದ್ದಾರೆ. ಇತರ ಹೆಸರನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುವ ವಿಷಯದ ಬಗ್ಗೆ ಇನ್ನಷ್ಟು ಚರ್ಚೆಯ ಅಗತ್ಯವಿದೆ ಎಂದು ನಿರ್ಣಯದಲ್ಲಿ ತಿಳಿಸಿರುವ ಕೊಲಿಜಿಯಂ, ಮುಂದಿನ ಸಭೆಯನ್ನು ಮೇ 16ಕ್ಕೆ ಮುಂದೂಡಿತು. ಕಳೆದ ವಾರ ನಡೆದಿದ್ದ ಕೊಲಿಜಿಯಂ ಸಭೆಯಲ್ಲಿ , ತಮ್ಮ ಆಯ್ಕೆಗೆ ಕೇಂದ್ರ ಸರಕಾರ ಸಲ್ಲಿಸಿದ್ದ ಆಕ್ಷೇಪಕ್ಕೆ ವಿವರವಾದ ಪ್ರತ್ಯುತ್ತರ ನೀಡಲು ನಿರ್ಧರಿಸಲಾಗಿತ್ತು. ಅಲ್ಲದೆ, ಎಲ್ಲಾ ರಾಜ್ಯಗಳಿಗೂ ನ್ಯಾಯೋಚಿತ ಪ್ರಾತಿನಿಧ್ಯದ ವಿಷಯದ ಹಿನ್ನೆಲೆಯಲ್ಲಿ, ಇತರ ಮೂರು ಹೈಕೋರ್ಟ್‌ಗಳ ನ್ಯಾಯಾಧೀಶರ ಹೆಸರನ್ನೂ ಸಭೆಯಲ್ಲಿ ಚರ್ಚಿಸಲಾಯಿತು. ಈ ಮಧ್ಯೆ, 2016ರಲ್ಲಿ ಉತ್ತರಾಖಂಡದಲ್ಲಿ ವಿಧಿಸಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ನ್ಯಾ. ಥೋಮಸ್ ರದ್ದುಗೊಳಿಸಿದ್ದ ಪ್ರಕರಣಕ್ಕೂ, ನ್ಯಾ. ಜೋಸೆಫ್ ಹೆಸರನ್ನು ತಿರಸ್ಕರಿಸಿರುವ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ರಾಷ್ಟ್ರಪತಿ ಆಡಳಿತವನ್ನು ರದ್ದುಗೊಳಿಸಿದ್ದ ಕಾರಣ ಕಾಂಗ್ರೆಸ್ ಸರಕಾರ ಉತ್ತರಾಖಂಡದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿತ್ತು.





