‘ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರ ಅಗತ್ಯ’
ಚುನಾವಣಾ ಆಯೋಗ ಸೂಚನೆ

ಸಾಂದರ್ಭಿಕ ಚಿತ್ರ
ಧಾರವಾಡ, ಮೇ 11: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಮತದಾನವು ನಾಳೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು, ಚುನಾವಣಾ ಅಭ್ಯರ್ಥಿಗಳು ಮತ್ತು ಪಕ್ಷಗಳು ಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್, ಯುಟ್ಯೂಬ್, ವಾಟ್ಸಪ್, ಟ್ವೀಟರ್, ಬ್ಲಾಗ್ ಹಾಗೂ ಇನ್ಸ್ಟಾಗ್ರಾಮ್ ಮೊದಲಾದವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವ್ಯಕ್ತಿಗಳು ವಾಟ್ಸಪ್ ಮೂಲಕ ನಿರ್ದಿಷ್ಟ ಪಕ್ಷದ ಗುಂಡಿಯನ್ನು ಒತ್ತಿ ಇವಿಎಂ ಪರೀಕ್ಷಿಸಿ ಎಂಬ ಸುಳ್ಳು ಸುದ್ದಿಯನ್ನು ಹರಿಬಿಡುತ್ತಿರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಮತದಾನಕ್ಕೆ ಬಳಸುವ ಎಲ್ಲ ಇವಿಎಂ ಮತಯಂತ್ರಗಳನ್ನು ಹಾಗೂ ವಿವಿಪ್ಯಾಟ್ಗಳನ್ನು ಸಂಪೂರ್ಣವಾಗಿ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಪರೀಕ್ಷಿಸಿ, ಪರಿಶೀಲಿಸಿ ಮತಕೇಂದ್ರಗಳಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮತದಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲ ಮತಯಂತ್ರಗಳು ನಿರ್ದಿಷ್ಟ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸಾಕಷ್ಟು ತರಬೇತಿಯೂ ನೀಡಲಾಗಿದೆ, ಅಲ್ಲದೇ ಸಾರ್ವಜನಿಕರಿಗಾಗಿ ಇವಿಎಂ ಮತ್ತು ವಿವಿಪ್ಯಾಟ್ಗಳ ಪ್ರಾತ್ಯಕ್ಷಿಕೆಯನ್ನು ನೀಡುವುದರ ಮೂಲಕ ಮತದಾರರಲ್ಲಿರುವ ಸಂದೇಹಗಳನ್ನು ನಿವಾರಿಸಲಾಗಿೆ ಎಂದು ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿ ಇರುವ ಈ ಸಂದರ್ಭದಲ್ಲಿ ಈ ರೀತಿಯ ತಪ್ಪುಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







