'ನೋಟಾಗೆ ಪ್ರಜಾಪ್ರಭುತ್ವ ಬದಲಿಸುವ ಶಕ್ತಿಯಿದೆ'
ಬೆಂಗಳೂರು, ಮೇ 11: ನೋಟಾಗೆ ಮತದಾನ ಮಾಡಿದರೆ ಪ್ರಜಾಪ್ರಭುತ್ವವನ್ನು ಬದಲಿಸುವ ಶಕ್ತಿಯಿದೆ. ಪ್ರತಿಯೊಬ್ಬ ಮತದಾರರು ಆಯ್ಕೆಗೆ ಅರ್ಹವಲ್ಲದ ಅಭ್ಯರ್ಥಿಗಳಿದ್ದರೆ ನೋಟಾವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ನಾಗರಿಕರ ವೇದಿಕೆ ಮುಖಂಡ ನಂಜುಂಡ ಪ್ರತಾಪ್ ತಿಳಿಸಿದ್ದಾರೆ.
ನೋಟಾವನ್ನು ವಿಶ್ವದ ವಿವಿಧ ದೇಶಗಳಲ್ಲಿ ಜಾರಿ ಮಾಡಿರುವ ರೀತಿ ನಮ್ಮಲ್ಲಿ ಜಾರಿ ಮಾಡಿದರೆ ಗುಣಮಟ್ಟದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಕಾರಿಯಾಗುತ್ತದೆ. ವಿಶ್ವದ ಹಲವು ಕಡೆಗಳಲ್ಲಿ ನೋಟಾಗೆ ಹೆಚ್ಚು ಮತ ಚಲಾವಣೆಯಾದರೆ ಸ್ಥಾನವನ್ನು ಖಾಲಿ ಬಿಡುವುದು, ನೇಮಕದಿಂದ ಭರ್ತಿ ಮಾಡುವುದು, ನಾಮಪತ್ರ ಮರು ಸಲ್ಲಿಕೆ ಮಾಡಿಸಿ, ಚುನಾವಣೆ ನಡೆಸುವ ಹಲವು ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತೆ. ಈ ಮೂಲಕ ನೈಜವಾಗಿ ಅಧಿಕಾರ ನೀಡುವ ಮತ್ತು ಪ್ರಜಾಪ್ರಭುತ್ವದ ಮೌಲ್ಯವನ್ನು ಸದೃಢಗೊಳಿಸುವ ಆಯ್ಕೆಗೆ ಶಕ್ತಿ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಆಯ್ಕೆಗೆ ಅರ್ಹವಾದ ವ್ಯಕ್ತಿ ಸಿಗದೇ ಇದ್ದ ಪಕ್ಷದಲ್ಲಿ ನೋಟಾಗೆ ಮತ ಚಲಾವಣೆ ಮಾಡಬಹುದು. ರಾಜಕಾರಣಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಮತದಾರರು ನಮ್ಮನ್ನು ಇಷ್ಟಪಡುತ್ತಿಲ್ಲ ಎಂಬ ಸಂದೇಶ ರವಾನೆ ಮಾಡಬೇಕು ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.
2013 ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಶೇ.57.63 ರಷ್ಟು ಮತದಾನ ನಡೆದಿತ್ತು. ಉಳಿದ ಯಾರೂ ಮತ ಹಾಕಿರಲಿಲ್ಲ. ಈ ಚುನಾವಣೆಯಲ್ಲಿ ಈ ಸ್ಥಿತಿಯನ್ನು ಬದಲಾಯಿಸಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ, ಸಾರ್ವಜನಿಕ ಮತದಾನದಿಂದ ದೂರ ಉಳಿಯುವ ಪದ್ಧತಿಯನ್ನು ಕೊನೆಗಾಣಿಸಬೇಕು. ಅದಕ್ಕಾಗಿ ನೋಟಾವನ್ನು ಎಲ್ಲರೂ ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ವೇದಿಕೆ ಸದಸ್ಯ ವಿಕ್ರಮ್ ತಿಳಿಸಿದ್ದಾರೆ.





