ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಬರೋಬ್ಬರಿ 31 ಕೋಟಿ ರೂ. ಮೌಲ್ಯದ ವಸ್ತು ವಶಕ್ಕೆ

ಬೆಂಗಳೂರು, ಮೇ 11: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 186 ಪ್ರಕರಣಗಳು ದಾಖಲಾಗಿದ್ದು,ಒಟ್ಟು 31 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಘೋಷಣೆಯಾದ ದಿನದಿಂದ ಇದುವರೆಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪರವಾನಿಗೆ ಹೊಂದಿದ್ದ 7,518 ಶಸ್ತ್ರಗಳನ್ನು ಜಮೆ ಮಾಡಿಕೊಳ್ಳಲಾಗಿದೆ. ಶಾಂತಿ ಭಂಗ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ಕಾಯಿದೆಗಳ ಅಡಿಯಲ್ಲಿ 3,473 ಪಕ್ರರಣಗಳನ್ನು ದಾಖಲಿಸಿಕೊಂಡು 3,302 ಜನರಿಂದ ಮುಚ್ಚಳಿಕೆ ಪಡೆಯಲಾಗಿದೆ. ಅಲ್ಲದೇ, ನೀತಿ ಸಂಹಿತೆ ಉಲ್ಲಂಘನೆಯ ಅಡಿಯಲ್ಲಿ 186 ಪ್ರಕರಣಗಳು ದಾಖಲಾಗಿವೆ ಎಂದರು.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ವಿವಿಧ ಪ್ರಕರಣಗಳಲ್ಲಿ 12.77 ಕೋಟಿ ರೂ.ನಗದು, 19.10 ಕೋಟಿ ರೂ. ಮೌಲ್ಯದ 21372 ಸೀರೆ, 5038 ಟೀ ಶರ್ಟ್, 23,393 ಟ್ರೋಜರ್, 59 ಕ್ಯಾಂಪ್, 120 ಕುಕ್ಕರ್, 220 ವಾಟರ್ ಬಾಟಲ್, 24 ಮಿಕ್ಸಿ ಗ್ರೈಂಡರ್, 5 ಹೊಲಿಗೆ ಯಂತ್ರ ಹಾಗೂ 44 ಕೆಜಿ ಚಿನ್ನದ ಆಭರಣ ಸೇರಿದಂತೆ ಒಟ್ಟು 31 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.





