ನೀಟ್ ಪರೀಕ್ಷೆಗೆ ಗರಿಷ್ಠ ವಯೋಮಿತಿಯನ್ನು ಎತ್ತಿ ಹಿಡಿದ ದಿಲ್ಲಿ ಉಚ್ಚ ನ್ಯಾಯಾಲಯ

ಹೊಸದಿಲ್ಲಿ,ಮೇ 11: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗಗಳಿಗೆ 25 ವರ್ಷ ಮತ್ತು ಮೀಸಲು ವರ್ಗಗಳಿಗೆ 30 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.
ಆದರೆ ಮುಕ್ತ ಶಾಲೆಗಳಲ್ಲಿ ಅಥವಾ ಖಾಸಗಿಯಾಗಿ ಓದಿರುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುವುದನ್ನು ನಿಷೇಧಿಸಿದ್ದ ಸಿಬಿಎಸ್‌ಇ ಅಧಿಸೂಚನೆಯಲ್ಲಿನ ನಿಬಂಧನೆಯನ್ನು ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ಮತ್ತು ಮೀಸಲು ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಗೊಳಿಸಿರುವ ಜ.22ರ ಸಿಬಿಎಸ್‌ಇ ಅಧಿಸೂಚನೆಯು ಕಾನೂನುಬದ್ಧ ಮತ್ತು ಸಿಂಧುವಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಚಂದ್ರಶೇಖರ್ ಅವರ ಪೀಠವು ಎತ್ತಿ ಹಿಡಿದಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನಿಂದ ಅಥವಾ ಮಾನ್ಯತೆ ಹೊಂದಿರುವ ರಾಜ್ಯ ಮುಕ್ತ ಶಾಲಾ ಮಂಡಳಿಗಳಿಂದ ಹಾಗೂ ಖಾಸಗಿಯಾಗಿ ಓದಿ 12ನೇ ತರಗತಿಯನ್ನು ಪೂರೈಸಿರುವ ಅಭ್ಯರ್ಥಿಗಳ ಪರೀಕ್ಷಾ ಫಲಿತಾಂಶಗಳನ್ನು ಇತರ ವಿದ್ಯಾರ್ಥಿಗಳ ಫಲಿತಾಂಶಗಳೊಂದಿಗೇ ಪ್ರಕಟಿಸುವಂತೆ ಪೀಠವು ಆದೇಶಿಸಿದೆ.
ಫೆ.22ರಂದು ಉಚ್ಚ ನ್ಯಾಯಾಲಯದ ಇನ್ನೊಂದು ಪೀಠವು ಸಿಬಿಎಸ್‌ಇ ಅಧಿಸೂಚನೆಗೆ ತಡೆಯಾಜ್ಞೆ ನೀಡಿತ್ತು.
ಮೇ 6ರಂದು ನೀಟ್ ಪರೀಕ್ಷೆ ನಡೆದಿದೆ.







