ದ.ಕ.ಜಿಲ್ಲೆ: ಚುನಾವಣಾ ಕರ್ತವ್ಯಕ್ಕೆ ಸರಕಾರಿ-ಖಾಸಗಿ ಬಸ್‌ಗಳ ಬಳಕೆ; ಪರದಾಡಿದ ಪ್ರಯಾಣಿಕರು

ಮಂಗಳೂರು, ಮೇ 11: ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಕರ್ತವ್ಯಕ್ಕೆ ಅಂದರೆ ಮತಗಟ್ಟೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ (ಬೋಂದೆಲ್) ಮತಗಟ್ಟೆಗಳಿಗೆ ತಲುಪಿಸುವ (ಮಸ್ಟರಿಂಗ್) ಮತ್ತು ಮತದಾನದ ಬಳಿಕ ಅಲ್ಲಿಂದ ಕೇಂದ್ರ ಸ್ಥಾನಕ್ಕೆ ಮರಳಿಸುವ (ಡಿಮಸ್ಟರಿಂಗ್) ಸಲುವಾಗಿ ಜಿಲ್ಲಾಡಳಿತವು ಜಿಲ್ಲೆಯ ಖಾಸಗಿ ಮತ್ತು ಸರಕಾರಿ ಬಸ್ಸುಗಳನ್ನು ಬಳಸಿಕೊಂಡ ಕಾರಣ ಶುಕ್ರವಾರ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.
ಜಿಲ್ಲಾಡಳಿತದ ಸೂಚನೆಯ ಮೇರೆಗೆ ಆಯಾಯ ರೂಟ್‌ನಲ್ಲಿ ಬಸ್‌ಗಳ ಸಂಚಾರವನ್ನು ಶುಕ್ರವಾರ ಮುಂಜಾನೆಯಿಂದಲೇ ಸ್ಥಗಿತಗೊಳಿಸಲಾಗಿದ್ದರೂ ಕೂಡ ಬಸ್ ಮಾಲಕರು ಅಥವಾ ಸಿಬ್ಬಂದಿ ವರ್ಗವು ಯಾವುದೇ ಮುನ್ಸೂಚನೆ ನೀಡದ ಕಾರಣ ಪ್ರಯಾಣಿಕರು ತೊಂದರೆಗೊಳಗಾದರು. ಅದರಲ್ಲೂ ಕೂಲಿ ಕಾರ್ಮಿಕರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾದರು.
ಗ್ರಾಮಾಂತರ ಪ್ರದೇಶದಲ್ಲಂತೂ ಈ ಪರದಾಟ ಶೋಚನೀಯವಾಗಿತ್ತು. ಕೆಲವು ರೂಟ್‌ಗಳಲ್ಲಿ ನಾಲ್ಕೈದು ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ಅಲ್ಲಿಂದಲೂ ಕೂಡ ಎರಡ್ಮೂರು ಬಸ್‌ಗಳನ್ನು ಜಿಲ್ಲಾಡಳಿತ ಚುನಾವಣಾ ನಿಮಿತ್ತ ಬಳಸಿಕೊಂಡಿದೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಪ್ರಯಾಣಿಕರು ನಿಗದಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಲಾಗದೆ ಪೇಚಾಡಿದರು.
ಮಂಗಳೂರು ನಗರ ವ್ಯಾಪ್ತಿಯಲ್ಲೂ ಕೂಡ ಖಾಸಗಿ ಮತ್ತು ಸರಕಾರಿ ಬಸ್ಸುಗಳನ್ನು ಚುನಾವಣಾ ಕಾರ್ಯನಿಮಿತ್ತ ಬಳಸಿಕೊಳ್ಳಲಾಗಿದ್ದು, ನಗರದಲ್ಲಿ ಬಸ್ ಪ್ರಯಾಣಿಕರು ರಿಕ್ಷಾವನ್ನು ಬಳಸಿಕೊಳ್ಳುವ ಪ್ರಮೇಯವೂ ಎದುರಾಯಿತು. ಪುತ್ತೂರು, ಸುಳ್ಯ, ಬೆಳ್ತಂಗಡಿ ಆಸುಪಾಸಿನಲ್ಲಿ ವ್ಯಾನ್ ಮತ್ತು ಜೀಪುಗಳನ್ನು ಬಳಸಿಕೊಂಡ ಕಾರಣ ಆ ಭಾಗದ ಪ್ರಯಾಣಿಕರು ತೊಂದರೆಗೀಡಾದರು.
ದ.ಕ.ಜಿಲ್ಲೆಯಲ್ಲಿ ಒಟ್ಟು 335 ಬಸ್, 163 ವ್ಯಾನ್, 150 ಜೀಪು ಸಹಿತ 648 ವಾಹನಗಳನ್ನು ಚುನಾವಣಾ ಕಾರ್ಯನಿಮಿತ್ತ ಬಳಸಿಕೊಳ್ಳಲಾಗಿದೆ. ಅದರಲ್ಲಿ ಸರಕಾರಿ ಮತ್ತು ಖಾಸಗಿ ಸಿಟಿ ಹಾಗೂ ಸರ್ವಿಸ್ ಬಸ್‌ಗಳೂ ಸೇರಿವೆ.
ಬೆಳ್ತಂಗಡಿಯಲ್ಲಿ 35 ಬಸ್, 17 ವ್ಯಾನ್, 26 ಜೀಪು ಸಹಿತ 78 ವಾಹನ, ಮೂಡುಬಿದಿರೆಯಲ್ಲಿ 46 ಬಸ್, 17 ವ್ಯಾನ್, 16 ಜೀಪು ಸಹಿತ 79 ವಾಹನ, ಮಂಗಳೂರು ನಗರ ಉತ್ತರದಲ್ಲಿ 54 ಬಸ್,23 ವ್ಯಾನ್, 6 ಜೀಪು ಸಹಿತ 83 ವಾಹನ, ಮಂಗಳೂರು ನಗರ ದಕ್ಷಿಣದಲ್ಲಿ 46 ಬಸ್, 4 ವ್ಯಾನ್ ಸಹಿತ 40 ವಾಹನ, ಮಂಗಳೂರು (ಉಳ್ಳಾಲ) 42 ಬಸ್, 23 ವ್ಯಾನ್, 20 ಜೀಪು ಸಹಿತ 85 ವಾಹನ, ಬಂಟ್ವಾಳದಲ್ಲಿ 49 ಬಸ್, 29 ವ್ಯಾನ್, 20 ಜೀಪು ಸಹಿತ 81 ವಾಹನ, ಪುತ್ತೂರಿನಲ್ಲಿ 34 ಬಸ್, 23 ವ್ಯಾನ್, 24 ಜೀಪು ಸಹಿತ 94 ವಾಹನ, ಸುಳ್ಯದಲ್ಲಿ 29 ಬಸ್, 27 ವ್ಯಾನ್, 38 ಜೀಪು ಸಹಿತ 94 ವಾಹನಗಳನ್ನು ಬಳಸಲಾಗಿದೆ.
ಶನಿವಾರ ಕೂಡ ಈ ಬಸ್‌ಗಳನ್ನು ಜಿಲ್ಲಾಡಳಿತ ಬಳಸಿಕೊಳ್ಳುವುದರಿಂದ ಪ್ರಯಾಣಿಕರು ಮತ್ತಷ್ಟು ತೊಂದರೆಗೀಡಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಚುನಾವಣಾ ಕಾರ್ಯನಿಮಿತ್ತ ಬಸ್ಸುಗಳನ್ನು ಬಳಸಿಕೊಂಡರೂ ಕೂಡ ರೂಟ್ ವ್ಯಾಪ್ತಿಯೊಳಗಿನ ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕಾಗಿತ್ತು. ಆದರೆ ಯಾವುದೇ ಮಾಹಿತಿ ನೀಡದ ಕಾರಣ ಇಂತಹ ಸಮಸ್ಯೆ ಸೃಷ್ಟಿಯಾಗಿದೆ ಎಮದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಠಾತ್ ಬಸ್‌ಗಳನ್ನು ಸ್ಥಗಿತಗೊಳಿಸದೆ ಮುನ್ಸೂಚನೆ ನೀಡಿದ್ದರೆ ಪರದಾಡುವುದು ತಪ್ಪುತ್ತಿತ್ತು ಎಂಬ ಅಭಿಪ್ರಾಯ ಪ್ರಯಾಣಿಕರಿಂದ ವ್ಯಕ್ತವಾಗಿದೆ.







