ಇರಾನ್, ಇಸ್ರೇಲ್ಗಳಿಂದ ಪರಸ್ಪರರ ನೆಲೆಗಳ ಮೇಲೆ ದಾಳಿ

ಸಾಂದರ್ಭಿಕ ಚಿತ್ರ
ವೌಂಟ್ ಬೆಂಟಲ್ (ಗೋಲನ್ ಹೈಟ್ಸ್), ಮೇ 11: ರಾಕೆಟ್ ದಾಳಿಗೆ ಪ್ರತಿಯಾಗಿ ಸಿರಿಯದಲ್ಲಿರುವ ಹಲವಾರು ಇರಾನ್ ಸೇನಾ ನೆಲೆಗಳ ಮೇಲೆ ಗುರುವಾರ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗೋಲನ್ ಹೈಟ್ಸ್ನಲ್ಲಿರುವ ಇಸ್ರೇಲಿ ನೆಲೆಗಳನ್ನು ಗುರಿಯಾಗಿಸಿ ಹಲವಾರು ರಾಕೆಟ್ಗಳನ್ನು ಉಡಾಯಿಸಿದ ಬಳಿಕ ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ. ದಾಳಿಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಗೋಲನ್ ಹೈಟ್ಸ್ ಸಿರಿಯದಿಂದ ವಶಪಡಿಸಿಕೊಂಡ ಪ್ರದೇಶವಾಗಿದ್ದು, ಇಸ್ರೇಲ್ನ ನಿಯಂತ್ರಣದಲ್ಲಿದೆ.
ಇರಾನ್ನ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ಗೆ ಸೇರಿದ ‘ಕುಡ್ಸ್ ಪಡೆ’ ರಾಕೆಟ್ ದಾಳಿಗಳನ್ನು ನಡೆಸಿದೆ ಎಂದು ಇಸ್ರೇಲ್ ಸೇನೆ ಆರೋಪಿಸಿದೆ. ಇಸ್ರೇಲ್ ಪಡೆಗಳ ಮೇಲೆ ಇರಾನ್ ಪಡೆಗಳು ನೇರವಾಗಿ ರಾಕೆಟ್ಗಳನ್ನು ಹಾರಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಅದೇ ವೇಳೆ, ಮೊದಲು ದಾಳಿ ನಡೆಸಿದ್ದು ಇಸ್ರೇಲ್ ಎಂಬುದಾಗಿ ಸಿರಿಯ ಮತ್ತು ಇರಾನ್ನ ಸುದ್ದಿ ಸಂಸ್ಥೆಗಳು ಆರೋಪಿಸಿವೆ. ಸಿರಿಯದ ಕುನೈತ್ರ ಪಟ್ಟಣದ ಮೇಲೆ ಇಸ್ರೇಲ್ ಫಿರಂಗಿ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ ಬಳಿಕ, ಸಿರಿಯ ಅದಕ್ಕೆ ಪ್ರತಿಕ್ರಿಯೆಯನ್ನಷ್ಟೇ ನೀಡಿದೆ ಎಂದು ಅವು ಹೇಳಿವೆ.







