2 ತಿಂಗಳೊಳಗೆ ಲೈಂಗಿಕ ಕಿರುಕುಳ ತಡೆ ಸಮಿತಿ ರಚಿಸಿ : ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಲ್ಲಿ, ಮೇ 11: ಎರಡು ತಿಂಗಳ ಒಳಗೆ ದೇಶಾದ್ಯಂತ ನ್ಯಾಯಾಲಯಗಳಲ್ಲಿ 2013ರ ಕಾನೂನಿಗೆ ಅನುಗುಣವಾಗಿ ಲೈಂಗಿಕ ಕಿರುಕುಳ ತಡೆ ಸಮಿತಿ ರೂಪಿಸುವಂತೆ ಎಲ್ಲ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿ ಅಥವಾ ಪ್ರಭಾರ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.
ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಹಾಗೂ ರಾಜ್ಯ ರಾಜಧಾನಿಯ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಒಂದು ವಾರದ ಒಳಗೆ ಸಮಿತಿ ರೂಪಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯದ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕೆಲವು ವಕೀಲರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಇದರಿಂದ ದಿಲ್ಲಿಯ ತಿಜ್ ಹಝಾರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರತಿಭಟನೆ ನಡೆದಿತ್ತು ಎಂದು ಆರೋಪಿಸಿ ಮಹಿಳಾ ವಕೀಲರೊಬ್ಬರು ಸಲ್ಲಿಸಿದ ದೂರಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠ ನಡೆಸಿತು. ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ, ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ ಎಂದು ಮಹಿಳಾ ವಕೀಲ ಹಾಗೂ ಬಾರ್ ಕೌನ್ಸಿಲ್‌ನ ನಾಯಕರಿಗೆ ತಿಳಿಸಿತು ಹಾಗೂ ಪರಸ್ಪರ ವಿರುದ್ಧವಾಗಿ ದಾಖಲಿಸಿದ ಎರಡು ಎಫ್‌ಐಆರ್‌ಗೆ ಸಂಬಂಧಿಸಿ ಎರಡೂ ಕಡೆಯವರನ್ನು ಬಂಧಿಸಬಾರದು ಎಂದು ಹೇಳಿತು. ವಕೀಲರು ಪರಸ್ಪರ ಸಲ್ಲಿಸಿರುವ ದೂರನ್ನು ತನಿಖೆ ನಡೆಸುವಂತೆ ಪೀಠ ದಿಲ್ಲಿ ಪೊಲೀಸ್‌ನ ಕ್ರೈಮ್ ಬ್ರಾಂಚ್‌ಗೆ ಸೂಚಿಸಿತು.







