ಬಿಜೆಪಿ-ಸಿಪಿಎಂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ: ದೂರು-ಪ್ರತಿದೂರು
ಮಂಗಳೂರು, ಮೇ 11: ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಮನೆ ಮನೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಯಾಗಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ತಿರುವೈಲು 20ನೆ ವಾರ್ಡ್‌ನಲ್ಲಿ ಬಿಜೆಪಿ ಕಾರ್ಪೊರೇಟರ್ ಹೇಮಲತಾ ಅವರ ಮೇಲೆ ಸಿಪಿಎಂ ಕಾರ್ಯಕರ್ತರಾದ ಮನೋಜ್, ಹೊನ್ನಯ್ಯ ಅಮೀನ್, ಹೊನ್ನಯ್ಯ ಅಂಚನ್ ಎಂಬವರು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆಂದು ದೂರು ನೀಡಲಾಗಿದೆ.
ಸಿಪಿಎಂ ಕಾರ್ಯಕರ್ತರಿಂದ ಪ್ರತಿದೂರು
ಹೇಮಲತಾ ಅವರು ಮನೆಮನೆಗೆ ತೆರಳಿ ಮತದಾನದ ಸ್ಲಿಪ್ ನೀಡುತ್ತಿದ್ದರು. ಇದನ್ನು ಮನೋಜ್, ಹೊನ್ನಯ್ಯ ಅಮೀನ್, ಹೊನ್ನಯ್ಯ ಅಂಚನ್ ಪ್ರಶ್ನಿಸಿದಾಗ, ‘ನಮ್ಮನ್ನು ಪ್ರಶ್ನೆ ಮಾಡಲು ನೀವ್ಯಾರು’ ಎಂದು ಹೇಮಲತಾ ಪ್ರಶ್ನಿಸಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ಹೇಮಲತಾ ಅವರು ಪತಿ ರಘು ಸಾಲ್ಯಾನ್‌ರನ್ನು ಕರೆಸಿ, ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಒಡ್ಡಿದ್ದಾರೆಂದು ಸಿಪಿಎಂ ಕಾರ್ಯಕರ್ತರು ದೂರು ನೀಡಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.







