ಎಂಡೋಸಲ್ಫಾನ್ ಪೀಡಿತರಿಂದ ಮತದಾನ
ಮಂಗಳೂರು, ಮೇ 12: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಸರಕಾರಿ ಹಿ.ಪ್ರಾ.ಶಾಲೆಯ 2 ಮತಗಟ್ಟೆಯಲ್ಲಿ ಸುಮಾರು 11 ಮಂದಿ ಎಂಡೋಸಲ್ಫಾನ್ ಪೀಡಿತರು ಆಸಕ್ತಿಯಿಂದಲೇ ಮತದಾನಗೈದರು.
ಎಂಡೋಸಲ್ಫಾನ್ ಪೀಡಿತರಿಗೆ ಗಾಲಿಕುರ್ಚಿ ಹಾಗೂ ಸರಕಾರಿ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಎಂಡೋಸಲ್ಫಾನ್ ಪೀಡಿತರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಅಲ್ಲದೆ ಅವರ ಆರೈಕೆ ಮಾಡುವ ಮನೆ ಮಂದಿ ಕೂಡ ಚುನಾವಣಾ ಆಯೋಗದ ಈ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶಾಲೆಯಲ್ಲಿ 2 ಮತಗಟ್ಟೆಗಳಿದ್ದು, ಎಂಡೋಸಲ್ಫಾನ್ ಪೀಡಿತರ ಮನೆಯಿಂದ ಮತದಾನ ಕೇಂದ್ರಕ್ಕೆ ಸರಕಾರಿ ವಾಹನದಲ್ಲೇ ಕರೆತರಲಾಯಿತು. ಅಲ್ಲದೆ ಗಾಲಿ ಕುರ್ಚಿಯಲ್ಲಿ ಸಹಾಯಕರೊಬ್ಬರ ನೆರವು ಪಡೆದು ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಯಿತು. ಈ ಬಗ್ಗೆ ಭದ್ರತೆಯಲ್ಲಿ ತೊಡಗಿದ್ದ ಬೆಂಗಳೂರು ಮೂಲದ ಪೊಲೀಸ್ ಭೀಮಣ್ಣ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ ಈ ಮತದಾನ ಕೇಂದ್ರದ ಸುತ್ತಮುತ್ತ ಹಲವು ಮಂದಿ ಎಂಡೋ ಸಲ್ಫಾನ್ ಪೀಡಿತರಿದ್ದಾರೆ. ಸರಕಾರದ ವತಿಯಿಂದ ಅವರಿಗೆ ಎಲ್ಲಾ ರೀತಿಯ ನೆರವು ಕಲ್ಪಿಸಲಾಗಿದೆ. ಅವರನ್ನು ಸರತಿ ಸಾಲಿನಲ್ಲಿ ನಿಲ್ಲಿಸದೆ ವಾಹನದಲ್ಲಿ ಕರೆ ತಂದೊಡನೆ ಗಾಲಿ ಕುರ್ಚಿಯಲ್ಲಿ ಕೂರಿಸಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ನನಗೆ ಈ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದರಿಂದ ಹೊಸ ಅನುಭವ ಸಿಕ್ಕಂತಾಗಿದೆ’ ಎಂದರು.