ನಾಲಿಗೆಯನ್ನು ಹೊರಚಾಚಲು ಕಷ್ಟವಾಗುತ್ತಿದೆಯೇ? ಅದು ಕ್ಯಾನ್ಸರ್ ಆಗಿರಬಹುದು!
ಯಾರಿಗೇ ಆಗಲಿ,ನಾಲಿಗೆಯನ್ನು ಹೊರಚಾಚಲು ಹೆಚ್ಚು ಕಷ್ಟವಾಗುತ್ತಿದೆ ಎಂದರೆ ಖಂಡಿತ ಏನೋ ಸಮಸ್ಯೆಯಿದೆ ಎಂದೇ ಅರ್ಥ. ನಿಮ್ಮ ನಾಲಿಗೆ ಮರಗಟ್ಟಿದ್ದರೆ ಅದು ನಾಲಿಗೆ ಕ್ಯಾನ್ಸರ್‌ನ ಲಕ್ಷಣ ಎಂದು ಗೊತ್ತಾದರೆ ಹೇಗಾಗಬಹುದು?
ಕ್ಯಾನ್ಸರ್ ಎಂದರೇ ಭಯಾನಕ ರೋಗ ಮತ್ತು ಅದರಲ್ಲಿಯೂ ನಾಲಿಗೆ ಕ್ಯಾನ್ಸರ್‌ಗೆ ತುತ್ತಾಗಿದೆ ಎಂದರೆ ಅದಕ್ಕಿಂತ ಹೆಚ್ಚಿನ ಯಾತನಾದಾಯಕ ವಿಷಯ ಬೇರೊಂದಿಲ್ಲ. ಬಾಯಿಯಲ್ಲಿ ಕ್ಯಾನ್ಸರ್ ಎಂಬ ಮಾರಿಯನ್ನು ಹೊತ್ತುಕೊಂಡು ಬದುಕುವುದು ಸುಲಭವಲ್ಲ ಮತ್ತು ವ್ಯಕ್ತಿಗೆ ಅದರ ಲಕ್ಷಣಗಳು ಗೊತ್ತಿಲ್ಲದಿದ್ದರೆ ಅದು ತೀವ್ರ ಚಿಂತಾಜನಕ ಸ್ಥಿತಿಗೆ ಕಾರಣವಾಗುತ್ತದೆ. ಹೀಗಾಗಿ ಈ ಭಯಾನಕ ರೋಗದ ವಿರುದ್ಧ ತಕ್ಷಣವೇ ಅಗತ್ಯ ಚಿಕಿತ್ಸಾ ಕ್ರಮಗಳನ್ನು ಆರಂಭಿಸಲು ಅದರ ಲಕ್ಷಣಗಳು ಗೊತ್ತಿರಲೇಬೇಕು.
ನಮ್ಮ ನಾಲಿಗೆಯು ಎರಡು ಭಾಗಗಳನ್ನು ಹೊಂದಿದೆ. ಒಂದು ನಮ್ಮ ಬಾಯಿಯಲ್ಲಿ ಕಾಣಿಸುವ ನಾಲಿಗೆಯಾದರೆ ಇನ್ನೊಂದು ಅದರ ಬುಡವಾಗಿದೆ. ಈ ಎರಡು ಭಾಗಗಳಲ್ಲಿ ಯಾವುದರಲ್ಲಿಯೂ ಕ್ಯಾನ್ಸರ್ ಕೋಶಗಳು ಬೆಳೆಯಬಲ್ಲವು. ನಮಗೆ ಕಾಣಿಸುವ ನಾಲಿಗೆಯನ್ನು ಹೊರಚಾಚಿದಾಗ ಅದು ನಾಲಿಗೆಯ ಇಡೀ ಉದ್ದದ ಮೂರನೇ ಎರಡು ಭಾಗದಷ್ಟಿರುತ್ತದೆ. ಕಾಣಿಸುವ ನಾಲಿಗೆಯ ಭಾಗದಲ್ಲಿ ಕ್ಯಾನ್ಸರ್ ಉಂಟಾದರೆ ಅದನ್ನು ಬಾಯಿ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.
ನಾಲಿಗೆಯ ತಳಭಾಗವು ಇಡೀ ಉದ್ದದ ಮೂರನೇ ಒಂದು ಭಾಗದಷ್ಟಿದ್ದು ಅದು ಗಂಟಲಿನ ಅತ್ಯಂತ ಸಮೀಪ ಅಥವಾ ಫ್ಯಾರಿಂಕ್ಸ್‌ನಲ್ಲಿರುತ್ತದೆ. ಈ ಭಾಗದಲ್ಲಿ ಉಂಟಾಗುವ ಕ್ಯಾನ್ಸರ್‌ನ್ನು ಒರೊಫ್ಯಾರಿಂಜಿಯಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ನಾಲಿಗೆ ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿರುವ ಈ ಕೆಳಗಿನ ಲಕ್ಷಣಗಳನ್ನು ಕಡೆಗಣಿಸಿದರೆ ಅದು ನಾವು ಮಾಡುವ ದೊಡ್ಡ ತಪ್ಪಾಗುತ್ತದೆ.
►ನಾಲಿಗೆಯಲ್ಲಿ ತೇಪೆಗಳು
ನಾಲಿಗೆಯ ಮೇಲೆ ಬಿಳಿಯ ಅಥವಾ ಕೆಂಪು ತೇಪೆಗಳು ಕಂಡು ಬಂದರೆ ಅದು ಕ್ಯಾನ್ಸರ್‌ನ ಲಕ್ಷಣವಾಗಿದೆ. ಈ ಪ್ಯಾಚ್ ಅಥವಾ ತೇಪೆ ನಾಲಿಗೆಯ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ದಿನಗಳೆದಂತೆ ಈ ತೇಪೆಗಳು ಗಾತ್ರದಲ್ಲಿ ದೊಡ್ಡದಾಗುತ್ತವೆ ಮತ್ತು ಇನ್ನಷ್ಟು ಗಾಢ ಹಾಗೂ ಬಿರುಸಾಗುತ್ತವೆ.
►ತೇಪೆಯಿಂದ ರಕ್ತಸ್ರಾವ
ಈ ತೇಪೆಗಳು ತುಲನಾತ್ಮಕವಾಗಿ ಮೃದುಗೊಂಡು ಅವುಗಳ ಮಧ್ಯಭಾಗದಲ್ಲಿ ರಕ್ತವು ಸುಲಭವಾಗಿ ಒಸರುತ್ತದೆ. ಅದರ ಮೇಲೆ ಒತ್ತಡ ಹೇರಿದರೆ ರಕ್ತಸ್ರಾವ ಆರಂಭವಾಗುತ್ತದೆ. ಅಗಿಯುವುದು,ಪಾನೀಯ ಸೇವನೆ ಮತ್ತು ಆಹಾರವನ್ನು ನುಂಗುವುದರಿಂದ ಈ ಕ್ಯಾನ್ಸರ್ ತೇಪೆಗಳ ಮೇಲೆ ಸುಲಭವಾಗಿ ಒತ್ತಡ ಬೀಳುತ್ತದೆ. ಈ ಜಾಗವು ಅತ್ಯಂತ ಮೃದುವಾಗಿರುವುದರಿಂದ ಯಾವುದೇ ಬಗೆಯ ಒತ್ತಡವು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇಂತಹ ವಿವರಿಸಲಾಗದ ರಕ್ತಸ್ರಾವವು ನಾಲಿಗೆ ಕ್ಯಾನ್ಸರ್‌ನ ಪ್ರಮುಖ ಲಕ್ಷಣವಾಗಿದೆ.
►ನೋವು
ಏನನ್ನಾದರೂ ಅಗಿದಾಗ ಅಥವಾ ನುಂಗಿದಾಗ ನೋವು ಕಾಣಿಸಿಕೊಂಡರೆ ಅದು ನಾಲಿಗೆ ಕ್ಯಾನ್ಸರ್‌ನ ಇನ್ನೊಂದು ಲಕ್ಷಣವಾಗಿದೆ.
►ಹುಣ್ಣು
ಕೆಲವೊಮ್ಮೆ ಬಾಯಿಯೊಳಗೆ ನಾಲಿಗೆಯ ಮೇಲೆ ವೃಣ ಅಥವಾ ಹುಣ್ಣು ಕಾಣಿಸಿಕೊಳ್ಳಬಹುದು ಮತ್ತು ಅದು ಮಾಯುವ ಲಕ್ಷಣಗಳಿಲ್ಲದಿರಬಹುದು. ಗಂಟಲು ನೋವು,ನಾಲಿಗೆ ಮತ್ತು ಬಾಯಿ ಮರಗಟ್ಟಿದ ಅನುಭವ, ಧ್ವನಿಯಲ್ಲಿ ಬದಲಾವಣೆ,ನಾಲಿಗೆ ಪೆಡಸಾಗುವುದರೊಡನೆ ಅದರ ಚಲನೆಯಲ್ಲಿ ಕ್ಷೀಣಿಸುವಿಕೆ ಮತ್ತು ದುರ್ವಾಸನೆಯಿಂದ ಕೂಡಿದ ಉಸಿರು ಇವು ನಾಲಿಗೆ ಕ್ಯಾನ್ಸರ್‌ನ ಇತರ ಲಕ್ಷಣಗಳಾಗಿವೆ. ಅಪರೂಪಕ್ಕೆ ಕಿವಿನೋವು ಕೂಡ ನಾಲಿಗೆ ಕ್ಯಾನ್ಸರ್‌ನ್ನು ಸೂಚಿಸಬಹುದು.
ನಾಲಿಗೆ ಕ್ಯಾನ್ಸರ್ ವ್ಯಕ್ತಿಯನ್ನು ತೀರ ಹತಾಶಗೊಳಿಸುವ ಜೊತೆಗೆ ತೀವ್ರ ನೋವನ್ನೂ ಉಂಟು ಮಾಡುತ್ತದೆ. ಬಾಯಿಯಲ್ಲಿ ಇಂತಹ ಭಯಾನಕ ರೋಗವನ್ನಿಟ್ಟುಕೊಂಡು ಬದುಕು ಸಾಗಿಸುವುದು ದುರ್ಭರವಾಗುತ್ತದೆ. ಆದ್ದರಿಂದ ನಾಲಿಗೆ ಕ್ಯಾನ್ಸರ್‌ನ ಲವಲೇಶ ಲಕ್ಷಣ ಕಂಡುಬಂದರೂ ಕಡೆಗಣಿಸದೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗಿದೆ.