ಔರಂಗಾಬಾದ್ ನಲ್ಲಿ ಗಲಭೆ: ಓರ್ವ ಮೃತ್ಯು, ಹಲವರಿಗೆ ಗಾಯ
ಹಲವೆಡೆ ಕರ್ಫ್ಯೂ, ಇಂಟರ್ನೆಟ್ ಸ್ಥಗಿತ

ಔರಂಗಾಬಾದ್,ಮೇ 12: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಶುಕ್ರವಾರ ತಡರಾತ್ರಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಗಳಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು,35ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಮೋಟಿಕಾರಂಜಾ ಪ್ರದೇಶದಲ್ಲಿ ನಿರ್ದಿಷ್ಟ ಸಮುದಾಯವೊಂದಕ್ಕೆ ಸೇರಿದ ವ್ಯಕ್ತಿಗಳ ಅಕ್ರಮ ನೀರಿನ ಸಂಪರ್ಕಗಳನ್ನು ಕಡಿದು ಹಾಕಿದ ನಂತರ ಸಂಭವಿಸಿದ ಗುಂಪು ಘರ್ಷಣೆ ಶೀಘ್ರವೇ ದಂಗೆಯ ಸ್ವರೂಪ ಪಡೆದುಕೊಂಡಿದ್ದು ದುಷ್ಕರ್ಮಿಗಳು ಹಲವಾರು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟದ ಘಟನೆಗಳೂ ನಡೆದಿವೆ.
ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಾದರೂ ಹಿಂಸಾಚಾರವನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ದಾಂಧಲೆಯಲ್ಲಿ ತೊಡಗಿದ್ದ ಗುಂಪುಗಳನ್ನು ಚದುರಿಸಲು ಲಾಠಿ ಪ್ರಹಾರ,ಅಶ್ರುವಾಯು ಪ್ರಯೋಗದ ಜೊತೆಗೆ ಪ್ಲಾಸ್ಟಿಕ್ ಗುಂಡುಗಳನ್ನೂ ಹಾರಿಸಲಾಗಿತ್ತು. ಹಿಂಸಾಗ್ರಸ್ತ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ.
ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಹೀಗೆ ಎರಡು ಬಾರಿ ಹಿಂಸಾಚಾರ ನಡೆದಿತ್ತಾರೂ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಆಯುಕ್ತ ಮಿಲಿಂದ ಭರಾಂಭೆ ಅವರು ಸುದ್ದಿಗಾರರಿಗೆ ತಿಳಿಸಿದರು.
ವ್ಯಾಪಕ ಹಿಂಂಸಾಚಾರ ನಡೆದಿದ್ದ ಪ್ರದೇಶಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಎರ್ಪಡಿಸಲಾಗಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆಯ ಮೆರೆಗೆ ಸಹಾಯಕ ಗೃಹ ಸಚಿವ ದೀಪಕ ಕೇಸರಕರ್ ಅವರು ಔರಂಗಾಬಾದ್‌ಗೆ ಭೇಟಿ ನಿಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ತನ್ಮಧ್ಯೆ ದಂಗೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಇಸುವಂತೆ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.