ಪುತ್ತೂರು; ನಕಲಿ ಮತದಾನಕ್ಕೆ ವಿಫಲ ಯತ್ನ: ಆರೋಪಿ ಯುವಕ ಪೊಲೀಸ್ ವಶಕ್ಕೆ

ಪುತ್ತೂರು,ಮೇ.12 : ಪುತ್ತೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಯುವಕನೊಬ್ಬನ್ನು ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಪತ್ತೆ ಹಚ್ಚಿ ಸಂಪ್ಯ ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಆಲಂತಡ್ಕ ಮತಗಟ್ಟೆಯಲ್ಲಿ ನಡೆದಿದೆ.
ಶಕೀರ್ ಎಂಬಾತ ನಕಲಿ ಮತದಾನಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ವ್ಯಕ್ತಿ. ಶಕೀರ್ ಸಂಜೆ ವೇಳೆ ಆಲಂತಡ್ಕ ಶಾಲೆಯ ಮತದಾನ ಕೇಂದ್ರಕ್ಕೆ ಆಗಮಿಸಿ ಇನ್ನೊಬ್ಬ ಮತದಾರನ ಹೆಸರಿನಲ್ಲಿ ನಕಲಿ ಮತದಾನಕ್ಕೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.
ಮತದಾನ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಈ ನಕಲಿ ಮತದಾನ ಯತ್ನವನ್ನು ಪತ್ತೆ ಮಾಡಿದ್ದು, ಮತದಾನ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದರು. ಬಳಿಕ ಸಂಪ್ಯ ಪೊಲೀಸರು ಮತದಾನ ಕೇಂದ್ರಕ್ಕೆ ಬಂದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story