ರಾಜರಾಜೇಶ್ವರಿ ನಗರ ಚುನಾವಣಾ ಮುಂದೂಡಿಕೆ: ಮತಗಟ್ಟೆಗೆ ಬಂದು ವಾಪಸ್ ಆದ ಮತದಾರರು
ಬೆಂಗಳೂರು, ಮೇ 12: ಇಲ್ಲಿನ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯನ್ನು ಕೊನೆಯ ಕ್ಷಣದಲ್ಲಿ ಮುಂದೂಡಿದ್ದು, ಈ ಬಗ್ಗೆ ಮತದಾರರಿಗೆ ಮಾಹಿತಿಯಿಲ್ಲದೆ ಮತದಾರರು ಮತಗಟ್ಟೆಗಳಿಗೆ ಮತ ಹಾಕಲು ಬಂದು ಕೊನೆಗೆ ಹಿಂದಿರುಗಿದ ಘಟನೆಗಳು ನಡೆದಿವೆ.
ಮನೆಯೊಂದರಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನ ಮೇ 28ಕ್ಕೆ ಮುಂದೂಡಲಾಗಿದೆ. ಶುಕ್ರವಾರ ಸಂಜೆ 7ಗಂಟೆಯ ಸುಮಾರಿಗೆ ಮುಂದೂಡಿಕೆ ಪ್ರಕಟಿಸಿದ್ದು, ಈ ಬಗ್ಗೆ ಮತದಾರರಿಗೆ ಮಾಹಿತಿ ಸಿಕ್ಕಿರಲಿಲ್ಲ.
ಬೆಳಗ್ಗೆ 7ಗಂಟೆಯಿಂದ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ತೆರಳಿದರೆ ಅಲ್ಲಿ ಮತ ಕೇಂದ್ರಗಳಿಗೆ ಬೀಗ ಹಾಕಿದ್ದನ್ನು ಕಂಡು ಅಕ್ಕಪಕ್ಕದವರನ್ನು ಪ್ರಶ್ನಿಸಿ, ಚುನಾವಣೆ ಮುಂದೂಡಿಕೆ ಮಾಹಿತಿ ಪಡೆದ ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
‘ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಕ್ಷುಲ್ಲಕ ಕಾರಣಕ್ಕೆ ಮುಂದೂಡಲಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಮತದಾರರ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಭ್ರಷ್ಟಾಚಾರ ನಡೆದಿಲ್ಲ. ಚುನಾವಣಾ ಆಯೋಗದ ಬಳಿ ಏನಾದರೂ ಪುರಾವೆ ಇದೆಯೇ’
-ಸಿದ್ದರಾಮಯ್ಯ ಮುಖ್ಯಮಂತ್ರಿ







