ಬೆಂಗಳೂರು: ಗ್ರಾಮಾಂತರ ಪ್ರದೇಶದಲ್ಲಿ ಗಮನ ಗೆಳೆದ ಪಿಂಕ್ ಮತಗಟ್ಟೆಗಳು
ಬೆಂಗಳೂರು, ಮೇ 12: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಸೇರುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಿದ್ದ ಹಲವು ಪಿಂಕ್ ಮತಗಟ್ಟೆಗಳು ಗಮನ ಸೆಳೆಯುವಂತಿದ್ದವು.
ರಾಜ್ಯ ವಿಧಾನಸಭಾ ಚುನಾವಣೆಯ ಅಂಗವಾಗಿ ಮಹಿಳೆಯರನ್ನು ಮತಗಟ್ಟೆಗಳಿಗೆ ಆಕರ್ಷಿಸುವ ಸಲುವಾಗಿ ತೆರೆದಿದ್ದ ಪಿಂಕ್ ಮತಗಟ್ಟೆಗಳಲ್ಲಿ ಪಿಂಕ್ ಬಣ್ಣದ ಉಡುಪು ಧರಿಸಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಮತದಾನ ಕೇಂದ್ರಕ್ಕೆ ಸ್ವಾಗತ ಕೋರುತ್ತಿದ್ದ ದೃಶ್ಯಗಳು ಆಕರ್ಷಕವಾಗಿತ್ತು.
ಮಹಿಳಾ ಸಶಕ್ತೀಕರಣದ ಉದ್ದೇಶದಿಂದ ಸ್ಥಾಪಿಸಿರುವ ಮತಗಟ್ಟೆಗಳಲ್ಲಿ ಎಲ್ಲವೂ ಪಿಂಕ್ ಬಣ್ಣದಲ್ಲಿ ನಿರ್ಮಾಣ ಮಾಡಲಾಗಿತ್ತು. ಮುಖ್ಯದ್ವಾರಕ್ಕೆ ಪಿಂಕ್ ಬಣ್ಣದ ಬಲೂನ್‌ಗಳಿಂದ ಸಿಂಗಾರ ಮಾಡಿದ್ದರೆ, ಒಳಭಾಗದಲ್ಲಿ ಪಿಂಕ್ ಬಣ್ಣದ ಬಟ್ಟೆಯಿಂದ ಸಿಂಗಾರ ಮಾಡಲಾಗಿತ್ತು. ಅಲ್ಲದೆ, ಮತ ಕೇಂದ್ರವನ್ನೂ ಪಿಂಕ್ ಬಣ್ಣದಿಂದ ನಿರ್ಮಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಿದ್ದ ಪಿಂಕ್ ಮತಗಟ್ಟೆಗಳಲ್ಲಿ ಯುವತಿಯರು, ಹಿರಿಯರು, ಅಂಗವಿಕಲರು, ವಯಸ್ಕರು ಸಂತಸ, ಉತ್ಸಾಹದಿಂದ ಮತದಾನ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.
ಮೊದಲ ಬಾರಿಗೆ ವಿಶೇಷವಾದ ರೀತಿಯಲ್ಲಿ ಪಿಂಕ್ ಮತಗಟ್ಟೆಗಳನ್ನು ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಖುಷಿಯಿಂದ ಮತದಾನ ಮಾಡಲು ಮುಂದೆ ಬರುತ್ತಿದ್ದಾರೆ. ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದರೆ ಮತದಾರರು ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸೂಲಿಬೆಲೆ ಪಿಂಕ್ ಮತಗಟ್ಟೆಯ ಅಧಿಕಾರಿ ಎಚ್.ಎಸ್. ಗೀತಾ ವಾರ್ತಾಭಾರತಿಗೆ ತಿಳಿಸಿದರು.







