ವಯೋವೃದ್ಧ ತಂದೆ-ತಾಯಿಯನ್ನು ತೊರೆದರೆ 6 ತಿಂಗಳು ಜೈಲು ಶಿಕ್ಷೆ

ಹೊಸದಿಲ್ಲಿ, ಮೇ 12: ವಯೋವೃದ್ಧ ತಂದೆ-ತಾಯಿಯನ್ನು ತ್ಯಜಿಸುವ ಹಾಗೂ ಅವರಿಗೆ ಕಿರುಕುಳ ನೀಡುವವರಿಗೆ ಈಗಿರುವ 3 ತಿಂಗಳು ಜೈಲು ಶಿಕ್ಷೆಯನ್ನು 6 ತಿಂಗಳಿಗೆ ಏರಿಸಲು ಕೇಂದ್ರ ಸರಕಾರ ಯೋಜಿಸುತ್ತಿದೆ.
ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ 2007ನ್ನು ಮರು ಪರಿಶೀಲಿಸುತ್ತಿರುವ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ, ದತ್ತು ಮಕ್ಕಳು ಹಾಗೂ ಮಲ ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಸೇರಿಸುವ ಮೂಲಕ ‘ಮಕ್ಕಳು’ ವ್ಯಾಖ್ಯಾನವನ್ನು ವಿಸ್ತರಿಸುವ ಪ್ರಸ್ತಾಪವನ್ನು ಕೂಡ ಮಾಡಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಿರುವ ಕಾಯ್ದೆ ಪ್ರಕಾರ ಜೈವಿಕ ಮಕ್ಕಳು ಹಾಗೂ ಮೊಮ್ಮಕ್ಕಳು ಮಾತ್ರ ಬರುತ್ತಾರೆ. ಸಚಿವಾಲಯ ರೂಪಿಸಿದ ಪೋಷಕರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕರಡು ಮಸೂದೆ 2018 ಒಮ್ಮೆ ಅನುಮತಿ ದೊರಕಿದರೆ ಈಗಿರುವ ಕಾಯ್ದೆ ರದ್ದಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಕಾಯ್ದೆ ಪ್ರತಿ ತಿಂಗಳಿಗೆ 10 ಸಾವಿರ ರೂ. ಜೀವನಾಂಶವನ್ನು ಗರಿಷ್ಠ ಮಿತಿಯನ್ನು ರದ್ದುಪಡಿಸುತ್ತದೆ ಹಾಗೂ ಈ ಮೊತ್ತ ಹೆಚ್ಚು ಕಡಿಮೆ ಆಗಬಹುದು. ಹೆಚ್ಚು ಗಳಿಸುತ್ತಿರುವವರು ತಮ್ಮ ಪೋಷಕರ ರಕ್ಷಣೆಗೆ ಹೆಚ್ಚು ಜೀವನಾಂಶ ನೀಡಬಹುದು. ಅಲ್ಲದೆ ಜೀವನಾಂಶದ ವ್ಯಾಖ್ಯಾನ ಆಹಾರ, ಬಟ್ಟೆ, ವಾಸ್ತವ್ಯ ಆರೋಗ್ಯ ಸೇವೆಯನ್ನು ಮೀರಿದೆ ಹಾಗೂ ಸುರಕ್ಷೆ ಹಾಗೂ ಭದ್ರತೆಯನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





