ಗಲಭೆಕೋರರ ಬಂಧನವಾಗದಿದ್ದಲ್ಲಿ ಅನಿರ್ದಿಷ್ಟ ನಿರಶನ: ಎಎಂಯು ವಿದ್ಯಾರ್ಥಿ ಒಕ್ಕೂಟ ಘೋಷಣೆ

ಅಲಿಗಢ,ಮೇ 12: ಅಲಿಗಢ ವಿಶ್ವವಿದ್ಯಾನಿಲಯದ ಆವರಣದೊಳಗೆ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಹಿಂಸಾಚಾರವನ್ನು ಪ್ರತಿಭಟಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಮುಷ್ಕರ ಶನಿವಾರ 11ನೇ ದಿನವನ್ನು ತಲುಪಿದೆ. ತಮ್ಮ ಬೇಡಿಕೆ ಇನ್ನೂ ಈಡೇರದಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಿಂದ ಸರದಿ ಉಪವಾಸ ಮುಷ್ಕರ ಆರಂಭಿಸಲು ಅವರು ನಿರ್ಧರಿಸಿದ್ದಾರೆ.
ಅಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿ ಒಕ್ಕೂಟದ ಸಾಮಾನ್ಯ ಸಭೆಯು ಶನಿವಾರ ನಡೆದಿರುವುದಾಗಿ ಒಕ್ಕೂಟದ ಅಧ್ಯಕ್ಷ ಮಶ್ಕೂರ್ ಉಸ್ಮಾನಿ ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯದ ಆವರಣದೊಳಗೆ ನುಗ್ಗಿ ಹಿಂಸಾಚಾರದಲ್ಲಿ ತೊಡಗಿದ ಸಂಘಪರಿವಾರ ಸಂಘಟನೆಗಳ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮ್ಮತಿಸದೆ ಇದ್ದಲ್ಲಿ ಇಂದು ಸಂಜೆಯಿಂದ ಸರದಿ ಉಪವಾಸ ಮುಷ್ಕರವನ್ನು ಆರಂಭಿಸಲು ನಿರ್ಧರಿಸಲಾಗಿದೆಯೆಂದು ಉಸ್ಮಾನಿ ಹೇಳಿದ್ದಾರೆ.
ಸಂಘಪರಿವಾರದ ಕಾರ್ಯಕರ್ತರು ವಿವಿ ಕ್ಯಾಂಪಸ್‌ನಲ್ಲಿ ಗಲಭೆ ನಡೆಸಿದ ದಿನವೇ ವಿವಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಲು ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಲಾಠಿಚಾರ್ಜ್‌ನಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದರೆಂದು ಉಸ್ಮಾನಿ ಹೇಳಿದ್ದಾರೆ.
ಶುಕ್ರವಾರ ತಡರಾತ್ರಿ ಎಎಂಯು ವಿದ್ಯಾರ್ಥಿ ಒಕ್ಕೂಟದ ನಾಯಕರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಕ ಚಂದ್ರಭೂಷಣ್ ಸಿಂಗ್ ಅವರನ್ನು ಭೇಟಿಯಾಗಿ ಶನಿವಾರ ಸಂಜೆಯೊಳಗೆ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಗಡುವು ನೀಡಿದ್ದರು.
ಶನಿವಾರದಿಂದ ಆರಂಭವಾಗಲಿರುವ ವಿವಿಯ ವಾರ್ಷಿಕ ಪರೀಕ್ಷೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳು ಜಿಲ್ಲಾಡಳಿತದ ಜೊತೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಆದಾಗಿಯೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಭೂಷಣ್ ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿ, ವಿದ್ಯಾರ್ಥಿಗಳು ಮುಷ್ಕರವನ್ನು ಕೈಬಿಡದೆ ಅವರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಬುಧವಾರ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರವು ಮಾಜಿ ಉಪರಾಷ್ಟ್ರಪತಿ ಹಾಮೀದ್ ಅನ್ಸಾರಿ ವಿರುದ್ಧ ದಾಳಿಗೆ ನಡೆದ ಸಂಚಿನ ಭಾಗವಾಗಿತ್ತೆಂಬ ಎಎಂಯು ವಿದ್ಯಾರ್ಥಿಒಕ್ಕೂಟದ ಆರೋಪಗಳನ್ನು ಕೂಡಾ ಅವರು ನಿರಾಕರಿಸಿದ್ದಾರೆ.
ಶುಕ್ರವಾರ ಸಂಜೆ ರಾಮಲೀಲಾ ಮೈದಾನದಲ್ಲಿ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಸಭೆ ನಡೆಸಿದ್ದು ಅಲಿಗಢದ ಆವರಣದಿಂದ ಮುಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವನ್ನು ತಕ್ಷಣವೇ ತೆಗೆದುಹಾಕಬೇಕೆಂದು ಆರೋಪಿಸಿದ್ದಾರೆ.







