ಭಟ್ಕಳ-ಹೊನ್ನಾವರ ವಿಧಾಸಭಾ ಕ್ಷೇತ್ರ: ಶಾಂತಿಯುತ ಚುನಾವಣೆ
ಮತದಾನ ಮಾಡಿದ ಶತಾಯುಷಿ ರಷೀದಾ ಖಾತುನ್

ಭಟ್ಕಳ, ಮೇ 12: ಭಟ್ಕಳ-ಹೊನ್ನಾವರ ವಿಧಾಸಭಾ ಕ್ಷೇತ್ರಕ್ಕೆ ಇಂದು ನಡೆದ ಮತದಾನವು ಅತ್ಯಂತ ಶಾಂತ ರೀತಿಯಲ್ಲಿ ನಡೆಯಿತು. ಬೆಳಿಗ್ಗೆ 6ಗಂಟೆಯಿಂದಲೆ ಮತದಾನ ಆರಂಭಗೊಂಡಿದ್ದು ಬೆಳಗ್ಗೆ 9 ಗಂಟೆ ವೇಳೆಗೆ ಶೇ.12 ರಷ್ಟು ಮತದಾನವಾಗಿತ್ತು. ಮಧ್ಯಾಹ್ನದ ಮೇಲೆ ಚುರುಕುಗೊಂಡ ಮತದಾನವು ಸಂಜೆ 5ಗಂಟೆಗೆ ಶೇ70 ದಾಖಲಾಗಿದೆ. 6 ಗಂಟೆ ವೇಳೆಗೆ 2-4% ಹೆಚ್ಚಾಗುವ ನಿರೀಕ್ಷೆಯಿದ್ದು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಮತದಾನ ಪ್ರಮಾಣದಲ್ಲಿ ಏರಿಕೆಯನ್ನು ಕಂಡಂತಾಗಿದೆ.
ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ನವಾಯತ್ ಕಾಲನಿ ನಿವಾಸಿ ಶತಾಯುಷಿ ರಷೀದಾ ಖಾತುನ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಬಂದು ಮತದಾನ ಮಾಡಿದ್ದು ಈ ಬಾರಿಯ ವಿಷೇಶವಾಗಿದ್ದರೆ, ಹೊನ್ನಾವರದ ಪ್ರಭಾತ್ ನಗರದ ನಿವಾಸಿ ಶೇ.100 ಅಂಗವಿಕಲತೆಯನ್ನು ಹೊಂದಿದ್ದರೂ ಪ್ರಥಮ ಬಾರಿ ಮತ ಚಾಲಾಯಿಸಿದ್ದು, ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎನ್ನಬಹುದು. 97 ವರ್ಷದ ಅಜ್ಜಿಯೊಬ್ಬರು ನಡೆದುಕೊಂಡು ಬಂದು ಮತದಾನ ಮಾಡುವುದರ ಮೂಲಕ ಯುವ ಮತದಾರರಲ್ಲಿ ಉತ್ಸಾಹ ತುಂಬಿದರು. ಶಂಸಿಯ ಪ್ಯಾರಾಲಸ್ ನಿಂದ ಬಳುತ್ತಿದ್ದ 80 ವರ್ಷದ ಅಂಡ್ರೀವ್ ಎಂಬುವವರು ಸಹ ಮತದಾನ ಮಾಡಿದ್ದು ವಿಷೇಶವಾಗಿತ್ತು.
ಭಟ್ಕಳದ ಗಂಡು ಮಕ್ಕಳ ಶಾಲೆಯಲ್ಲಿ ಮತಯಂತ್ರ ಕೈಕೊಟ್ಟು ಅರ್ದ ಗಂಟೆ ಮತದಾನ ತಡವಾಗಿ ಆರಂಭಗೊಂಡಿತು. ಅಲ್ಲದೆ ಹೊನ್ನಾವರ ತಾಲೂಕಿನ ಮೂಡ್ಕಣಿ ಸಮೀಪದ ಸ.ಹಿ.ಪ್ರಾ. ಶಾಲೆಯ ಅಡಕಾರಿನ 26ನೇ ಬೂತ್ ನಲ್ಲಿ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದಾಗಿ ಒಂದು ಗಂಟೆಗೂ ಅಧಿಕ ಸಮಯ ಮತದಾನ ವಿಳಂಬವಾಗಿದೆ. ಈ ಬೂತ್ ನಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಲು ಬಂದ ಯುವ ಮತದಾರ ಶರತ್ ಮೂಡ್ಕಣೀ ಎಂಬುವವರು ನಾನು ಈ ಸಲ ಪ್ರಥಮ ಬಾರಿಗೆ ಮತ ಚಲಾಯಿಸುತ್ತಿದ್ದು ಮಶಿನ್ ಹಾಳಾಗಿದ್ದು ಕಂಡು ಬೇಸವಾಗಿದೆ ಎಂದರು.
ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ನಡುವೆ ಮಾತಿನ ಚಕಮಕಿಯನ್ನು ಹೊರತು ಪಡಿಸಿದರೆ ಉಳಿದಂತೆ ಕ್ಷೇತ್ರಾದ್ಯಂತ ಮತದಾನ ಶಾಂತಿಯುತವಾಗಿ ನಡೆಯಿತು.
ಅಭ್ಯರ್ಥಿಗಳಿಂದ ಮತದಾನ: ಚಿತ್ರಾಪುರ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ, ಈ ಬಾರಿ ಭಟ್ಕಳದಲ್ಲಿ ಬಿಜೆಪಿ ಪರ ಅಲೆ ಇದೆ ಗೆಲುವು ನಮ್ಮದೆ ಎಂದರು. ಮುರುಡೇಶ್ವರದಲ್ಲಿ ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಮಾಂಕಾಳ್ ವೈದ್ಯ ಭಟ್ಕಳದಲ್ಲಿ ಮತದಾರರು ಅಭಿವೃದ್ಧಿಯ ಪರವಾಗಿದ್ದಾರೆ ಜನರ ಅಪಾರ ಬೆಂಬಲದೊಂದಿಗೆ ಮತ್ತೆ ರಾಜ್ಯದಲ್ಲಿ ನಮ್ಮ ಅಧಿಕಾರ ಬರುತ್ತದೆ ಜನರ ಆಶೀರ್ವಾದ ನನಗಿದೆ ಎಂದರು.







