ಇವಿಎಂ, ವಿವಿಪ್ಯಾಟ್‌ಗಳಲ್ಲಿ ಭದ್ರಗೊಂಡಿದೆ ಅಭ್ಯರ್ಥಿಗಳ ಭವಿಷ್ಯ !
ಕುತೂಹಲ ಸೃಷ್ಟಿಸಿದೆ ಮತದಾರರ ನಡೆ

ಮಂಗಳೂರು, ಮೇ 12: ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ ಎಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕದ ವಿಧಾನಸಭಾಚುನಾವಣೆ ಅದರಲ್ಲೂ, ದ.ಕ. ಜಿಲ್ಲೆಯಲ್ಲಿ ಮತದಾರರ ನಡೆ ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ದ.ಕ. ಜಿಲ್ಲೆಯ 58 ಅಭ್ಯರ್ಥಿಗಳ ಭವಿಷ್ಯವು ಇವಿಎಂ ಹಾಗೂ ವಿವಿಪ್ಯಾಟ್‌ಗಳಲ್ಲಿ ಭದ್ರವಾಗಿದೆ.
2004ರಿಂದ ಮತಯಂತ್ರ (ಇವಿಎಂ)ಗಳನ್ನು ಬಳಸಲಾಗುತ್ತಿದೆ. ಹಾಗಿದ್ದರೂ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಇವಿಎಂ ಯಂತ್ರಗಳ ಕಾರ್ಯಾಚರಣೆ ಕುರಿತಂತೆ ಹಲವಾರು ರೀತಿಯ ಸಂಶಯ, ಅನುಮಾನಗಳಿಗೆ ಕಾರಣವಾದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹೊಸ ಪ್ರಯೋಗವೆಂಬಂತೆ ವಿವಿ ಪ್ಯಾಟ್‌ಗಳನ್ನು ಅಳವಡಿಸಲಾಗಿದೆ. ಇವಿಎಂನಲ್ಲಿ ಚಲಾಯಿಸಿದ ಮತ, ತಮ್ಮ ಅರ್ಹ ಅಭ್ಯರ್ಥಿಗೆ ಸಲ್ಲಿಕೆಯಾಗಿರುವುದು ವಿವಿಪ್ಯಾಟ್‌ನ (ಮತಪತ್ರದ ರೂಪದಲ್ಲಿ) ಮೂಲಕ ಮತದಾರು ಖಾತರಿ ಪಡಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹಾಗಾಗಿ ಈ ಬಾರಿ ಇವಿಎಂ ಜತೆಗೆ, ವಿವಿಪ್ಯಾಟ್‌ಗಳೂ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದು, ಮತದಾರನ ನಡೆ ಮೇ 15ರ ಮತ ಎಣಿಕೆ ವರೆಗೆ ಈ ಇಲೆಕ್ಟ್ರಾನಿಕ್ ಯಂತ್ರಗಳಲ್ಲಿ ಭದ್ರಗೊಂಡಿದೆ.
ಎಂಡೋಸಲ್ಫಾನ್ ಪೀಡಿತರಿಂದ ಮತದಾನ
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಕ್ಕಡ ಸಮೀಪದ ಉಪ್ಪಾರ ಪಳಿಕೆ ಸರಕಾರಿ ಹಿ.ಪ್ರಾ.ಶಾಲೆಯ 2 ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಯ ವೇಳೆಗೆ ಸುಮಾರು 11 ಮಂದಿ ಎಂಡೋಸಲ್ಫಾನ್ ಪೀಡಿತರು ಆಸಕ್ತಿಯಿಂದಲೇ ಮತದಾನಗೈದರು.
ಎಂಡೋಸಲ್ಫಾನ್ ಪೀಡಿತರಿಗೆ ಗಾಲಿ ಕುರ್ಚಿ ಹಾಗೂ ಸರಕಾರಿ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಎಂಡೋಸಲ್ಫಾನ್ ಪೀಡಿತರು ಉತ್ಸಾಹ ದಿಂದ ಮತದಾನದಲ್ಲಿ ಪಾಲ್ಗೊಂಡರು. ಅಲ್ಲದೆ ಅವರ ಆರೈಕೆ ಮಾಡುವ ಮನೆ ಮಂದಿ ಕೂಡ ಚುನಾವಣಾ ಆಯೋಗದ ಈ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶಾಲೆಯಲ್ಲಿ 2 ಮತಗಟ್ಟೆಗಳಿದ್ದು, ಎಂಡೋಸಲ್ಫಾನ್ ಪೀಡಿತರ ಮನೆಯಿಂದ ಮತದಾನ ಕೇಂದ್ರಕ್ಕೆ ಸರಕಾರಿ ವಾಹನದಲ್ಲೇ ಕರೆತರಲಾಯಿತು. ಅಲ್ಲದೆ ಗಾಲಿ ಕುರ್ಚಿಯಲ್ಲಿ ಸಹಾಯಕರೊಬ್ಬರ ನೆರವು ಪಡೆದು ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಯಿತು. ಜಿಲ್ಲಾದ್ಯಂತ ಎಂಡೋ ಪೀಡಿತರಲ್ಲದೆ ವಿಕಲಚೇತನರಿಗೆ ಸಹಕರಿಸಲು ಸುಮಾರು 410 ಗಾಲಿ ಕುರ್ಚಿಗಳನ್ನು ಬಳಸಿಕೊಳ್ಳಲಾಗಿತ್ತು.
ಈ ಬಗ್ಗೆ ಭದ್ರತೆಯಲ್ಲಿ ತೊಡಗಿದ್ದ ಬೆಂಗಳೂರು ಮೂಲದ ಪೊಲೀಸ್ ಭೀಮಣ್ಣ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ ಈ ಮತದಾನ ಕೇಂದ್ರದ ಸುತ್ತ ಮುತ್ತ ಹಲವು ಮಂದಿ ಎಂಡೋ ಸಲ್ಫಾನ್ ಪೀಡಿತರಿದ್ದಾರೆ. ಸರಕಾರದ ವತಿಯಿಂದ ಅವರಿಗೆ ಎಲ್ಲಾ ರೀತಿಯ ನೆರವು ಕಲ್ಪಿಸಲಾಗಿದೆ. ಅವರನ್ನು ಸರತಿ ಸಾಲಿನಲ್ಲಿ ನಿಲ್ಲಿಸದೆ ವಾಹನದಲ್ಲಿ ಕರೆತಂದೊಡನೆ ಗಾಲಿ ಕುರ್ಚಿಯಲ್ಲಿ ಕೂರಿಸಿ, ಅಥವಾ ಸಹಾಯಕರ ಮೂಲಕ ಅವರನ್ನು ಮತದಾನಗಟ್ಟೆಗೆ ಕರೆದೊಯ್ದು ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ನನಗೆ ಈ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದರಿಂದ ಹೊಸ ಅನುಭವ ಸಿಕ್ಕಂತಾಗಿದೆ’ ಎಂದರು.
ಮತಗಟ್ಟೆಗಳಲ್ಲಿ ಬಿಎಸ್‌ಎಫ್, ಎಸ್‌ಎಸ್‌ಬಿ ಯೋಧರ ಬಿಗಿ ಕಣ್ಗಾವಲು !
ಬೆಳ್ತಂಗಡಿಯ ನಾರಾವಿ, ಕುತ್ಲೂರು ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಹಾಗೂ ಕ್ಲಿಷ್ಟ ಮತಗಟ್ಟೆಗಳಲ್ಲಿ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಯೋಧರ ಬಿಗಿ ಕಣ್ಗಾವಲಿನೊಂದಿಗೆ ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
ಮಾಣಿ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯದಲ್ಲಿದ್ದ ಬಿಎಸ್‌ಎಫ್‌ನ ಯೋಧ ದಯಾ ರಾಮ್‌ರನ್ನು ‘ವಾರ್ತಾಭಾರತಿ’ ಮಾತನಾಡಿಸಿದಾಗ, ‘‘ಗಡಿ ಭದ್ರತೆಯ ಸೇವೆಗೆ ಹೋಲಿಸಿದರೆ ಚುನಾವಣಾ ಕರ್ತವ್ಯ ವಿಶೇಷ ಅನುಭವ. ದಕ್ಷಿಣ ಕನ್ನಡ ಜಿಲ್ಲೆಗೆ ಇದು ನನ್ನ ಪ್ರಥಮ ಆಗಮನ. ಇಲ್ಲಿ ಸೆಖೆಯ ಅನುಭವ ಕೊಂಚ ಅಧಿಕವಾಗಿದ್ದರೂ ಇಲ್ಲಿನ ಜನರು ಒಳ್ಳೆಯವರು. ಎಲ್ಲಾ ರೀತಿಯ ವ್ಯವಸ್ಥೆಯನ್ನು ಸಿಬ್ಬಂದಿಗಳಿಗೆ ಒದಗಿಸಲಾಗಿದೆ’’ ಎಂದು ಅಭಿಪ್ರಾಯಿಸಿದರು.
34 ವರ್ಷಗಳಿಂದ ಗಡಿ ಭದ್ರತಾ ಪಡೆಯಲ್ಲಿ ಸೇವೆಯಲ್ಲಿರುವ ದಯಾ ರಾಮ್ ಮೂಲತ: ಜಮ್ಮುಕಾಶ್ಮೀರದವರಾಗಿದ್ದು, ರಾಜಸ್ತಾನದಲ್ಲಿ ಬಿಎಸ್‌ಎಫ್‌ನ ಕರ್ತವ್ಯದಲ್ಲಿರುವುದಾಗಿ ಹೇಳಿದರು.
ಸರಕಾರದ ಎಲ್ಲಾ ಸೇವೆಯೂ ಮಹತ್ವದ್ದು ಎನ್ನುತ್ತಾರೆ ಎಸ್‌ಎಸ್‌ಬಿಯ ಯೋಧ, ಉತ್ತರಾಂಚಲ ಮೂಲದ ಭಜನ್ ಸಿಂಗ್. ಇದು ಸಮುದ್ರದಿಂದ ನಗರಿ ಯಾಗಿರುವ ಕಾರಣ ಇಲ್ಲಿನ ವಾತಾರವಣ ಸ್ವಲ್ಪ ಮಟ್ಟಿಗೆ ನಮಗೆ ಬಿಸಿ ಎನ್ನಿಸುತ್ತದೆ. ಅದನ್ನು ಹೊರತುಪಡಿಸಿ ಇಲ್ಲಿನ ಸ್ಥಳೀಯರಾಡುವ ಭಾಷೆಯ ಬಗ್ಗೆ ನಮಗೆ ಅರಿವಿಲ್ಲದ ಕಾರಣ ಸಂಭಾಷಣೆಗೆ ತೊಡಕಾಗುತ್ತಿದೆಯೇ ಹೊರತು ಉಳಿದಂತೆ ಇಲ್ಲಿನ ಜನರು ಉತ್ತಮವಾಗಿ ಬೆರೆಯುತ್ತಾರೆ, ಸಹಕರಿಸುತ್ತಾರೆ.
ನಾಲ್ಕೈದು ವರ್ಷಗಳ ಹಿಂದೆ ಕೇರಳದಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದ್ದೇನೆ. ಯಾವುದೇ ರೀತಿಯ ಗಲಭೆ, ದೇಶದ ಗಡಿಯನ್ನು ಕಾಯುವುದು, ಹಿಂಸಾಚಾರ ಸೇರಿದಂತೆ ಯಾವುದೇ ರೀತಿಯ ಸೇವೆಗೆ ನಮ್ಮನ್ನು ನಿಯೋಜಿಸದರೂ ಅದನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ’’ ಎನ್ನುತ್ತಾರೆ.







