ಜುಜುಬಿ ಪ್ರಕರಣಗಳು ಸುಪ್ರೀಂವರೆಗೆ ತಲುಪದಂತೆ ನೋಡಿಕೊಳ್ಳಿ: ಎಎಸ್‌ಜಿಗಳಿಗೆ ಎಜಿ ನಿರ್ದೇಶ

ಹೊಸದಿಲ್ಲಿ,ಮೇ 12: ವ್ಯಕ್ತಿಗಳ ಸೇವಾ ವಿಷಯಗಳಿಗೆ ಸಂಬಂಧಿಸಿದ ಸಚಿವಾಲಯಗಳ ಜುಜುಬಿ ಮೇಲ್ಮನವಿಗಳು ಸರ್ವೋಚ್ಚ ನ್ಯಾಯಾಲಯದವರೆಗೆ ತಲುಪದಂತೆ ಮತ್ತು ಸರಕಾರದ ನೀತಿ ನಿರ್ಧಾರವು ಒಳಗೊಂಡ ಪ್ರಕರಣಗಳಲ್ಲಿ ಮಾತ್ರ ವಿಶೇಷ ರಜಾ ಅರ್ಜಿ(ಎಸ್‌ಎಲ್‌ಪಿ)ಗಳು ಸಲ್ಲಿಕೆಯಾಗುವಂತೆ ನೋಡಿಕೊಳ್ಳುವಂತೆ ಅಟಾರ್ನಿ ಜನರಲ್ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ)ಗಳಿಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ವ್ಯಕ್ತಿಗಳ ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯಗಳ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿಗಳನ್ನು ಸಲ್ಲಿಸಲು ವಿವಿಧ ಸಚಿವಾಲಯಗಳು ಪ್ರಸ್ತಾವಗಳನ್ನು ಕಾನೂನು ಸಚಿವಾಲಯದ ಮುಂದಿರಿಸಿದ ಸಂದರ್ಭಗಳಲ್ಲಿ ಜುಜುಬಿ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯವನ್ನು ತಲುಪದಂತೆ ನೋಡಿಕೊಳ್ಳುವಂತೆ ಇತ್ತೀಚಿಗೆ ನಡೆದ ಸಭೆಯಲ್ಲಿ ಅಡ್ವೊಕೇಟ್ ಜನರಲ್ ಅವರು ಎಎಸ್‌ಜಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿರುವ ಬಲ್ಲ ಮೂಲಗಳು,ಸರ್ವೋಚ್ಚ ನ್ಯಾಯಾಲಯದಲ್ಲಿ ಅನಗತ್ಯ ಸರಕಾರಿ ದಾವೆಗಳ ಸಂಖ್ಯೆಯನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಹೇಳಿವೆ.
ಕೇಂದ್ರದ ಯಾವುದೇ ಸಚಿವಾಲಯ ಅಥವಾ ಇಲಾಖೆಯು ಎಸ್‌ಎಲ್‌ಪಿಯನ್ನು ದಾಖಲಿಸುವ ಮುನ್ನ ಎಎಸ್‌ಜಿಯೋರ್ವರ ಅಭಿಪ್ರಾಯವನ್ನು ಪಡೆಯಲು ತನ್ನ ಪ್ರಸ್ತಾವವನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸುತ್ತದೆ. ಎಎಸ್‌ಜಿಯವರ ಅಭಿಪ್ರಾಯ ಧನಾತ್ಮಕವಾಗಿದ್ದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್‌ಎಲ್‌ಪಿ ಯನ್ನು ಸಲ್ಲಿಸಲಾಗುತ್ತದೆ.
ಕಾನೂನು ಸಚಿವಾಲಯದ ವರದಿಯಂತೆ ನ್ಯಾಯಾಲಯಗಳಲ್ಲಿ ಬಾಕಿಯಿರುವ ಶೇ.46ರಷ್ಟು ಪ್ರಕರಣಗಳಲ್ಲಿ ಕೇಂದ್ರ ಸರಕಾರವು ಕಕ್ಷಿಯಾಗಿದ್ದು,ಅತ್ಯಂತ ದೊಡ್ಡ ಕಕ್ಷಿದಾರನಾಗಿದೆ. ಈ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಅದು ಬಯಸಿದೆ.
ದೇಶಾದ್ಯಂತ ನ್ಯಾಯಾಲಯಗಳಲ್ಲಿ 3.14 ಕೋಟಿಗೂ ಅಧಿಕ ಪ್ರಕರಣಗಳು ಬಾಕಿಯಿವೆ.
ಹಿರಿಯ ಅಧಿಕಾರಿಗಳ ‘ನಾನು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ’ ಎಂಬ ಧೋರಣೆಯು ನ್ಯಾಯಾಲಯಗಳಲ್ಲಿ ಬಾಕಿಯಿರುವ ಲಕ್ಷಾಂತರ ಪ್ರಕರಣಗಳಲ್ಲಿ ಸರಕಾರವು ಕಕ್ಷಿಯಾಗಿರಲು ಪ್ರಮುಖ ಕಾರಣಗಳಲ್ಲೊಂದಾಗಿದೆ. ಸರಕಾರಿ ಇಲಾಖೆಗಳು ಮತ್ತು ಸಚಿವಾಲಯಗಳು ತ್ವರಿತ ನಿರ್ಧಾರಗಳನ್ನು ತೆಗೆದುಕೊಂಡರೆ ಹೆಚ್ಚಿನ ಪ್ರಕರಣಗಳು ನ್ಯಾಯಾಲಯಗಳನ್ನು ತಲುಪುವುದಿಲ್ಲ ಎಂದು ಕಾನೂನು ಆಯೋಗದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.







