ಕಾಪು ಕ್ಷೇತ್ರ: ಶಾಂತಿಯುತ ಮಯತದಾನ

ಪಡುಬಿದ್ರೆ, ಮೇ 12: ಶನಿವಾರ ನಡೆದ ವಿಧಾನಸಭಾ ಚುನಾವಣೆಯ ಮತದಾನವು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕೆಲವೊಂದು ಗೊಂದಲಗಳನ್ನು ಹೊರತುಪಡಿಸಿ ಬಿರುಸಿನಿಂದ ನಡೆಯಿತು. ಅವರಾಲುಮಟ್ಟುವಿನಲ್ಲಿ ಹೊಸ ಮತಗಟ್ಟೆ ಆರಂಭಿಸಲಾಗಿದೆ.
ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅವರಾಲುಮಟ್ಟುವಿನ ಮತದಾರರು ಇದುವರೆಗೆ ಮತದಾನಕ್ಕಾಗಿ ಸುಮಾರು 4 ಕಿಮೀ ದೂರದ ಮತಗಟ್ಟೆಗೆ ಹಕ್ಕು ಚಲಾಯಿಸುವವರು ತೆರಳಬೇಕಾಗಿತ್ತು. ಜನರ ಬೇಡಿಕೆಯಂತೆ ಈ ಬಾರಿ ಅವರಾಲು ಮಟ್ಟು ವೆಂಕಟರಮಣ ಶಾಲೆಯಲ್ಲಿ ಮತಗಟ್ಟೆಯನ್ನು ಆರಂಭಿ ಸಿದ್ದರಿಂದ ಈ ಭಾಗದ ಮತದಾರು ಉತ್ಸಾಹದಿಂದ ಬೆಳಗ್ಗೆಯೇ ಮತದಾನ ಮಾಡಿದರು. ಈ ವ್ಯವಸ್ಥೆ ಕಲ್ಪಿಸಿಕೊಟ್ಟ ಜಿಲ್ಲಾಡಳಿತವನ್ನು ಗ್ರಾಮಸ್ಥರು ಪ್ರಶಂಸಿಸಿದರು.
ಹೆಚ್ಚಿನ ಮತಗಟ್ಟೆಗಳಲ್ಲಿ ಬಿರುಸಿನ ಮತದಾನವಾಗಿದ್ದು, ಬೆಳಗ್ಗೆ 9 ಗಂಟೆಯ ವೇಳೆಗೆ ಶೇ. 20ರಷ್ಟು ಮತದಾನವಾಗಿತ್ತು. ಮತದಾನಕ್ಕಾಗಿ ಎಲ್ಲಾ ಕಡೆ ಸಾಕಷ್ಟು ವ್ಯವಸ್ಥೆಗಳನ್ನು ಕೈಗೊಂಡಿದ್ದರು. ಅಶಕ್ತ ಹಾಗೂ ದಿವ್ಯಾಂಗ ಮತದಾರರಿಗೆ ಪ್ರಥಮ ಬಾರಿಗೆ ಗಾಲಿಕುರ್ಚಿಯ ವ್ಯವಸ್ಥೆಯನ್ನು ಮಾಡುವ ಮೂಲಕ ಅವರು ಸುಲಲಿತವಾಗಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಸಂಕಷ್ಟ ಅನುಭವಿಸಿದ ಅಸಕ್ತರು: ಪಲಿಮಾರಿ ಜೂನಿಯರ್ ಕಾಲೇಜಿನ ಮತಗಟ್ಟೆಯಲ್ಲಿ ಗಾಲಿಕುರ್ಚಿ ನೀಡಿದ್ದರೂ, ಸಿಬ್ಬಂದಿಯಿಲ್ಲದೆ ಕುರ್ಚಿ ಬಳಕೆಯಾಗದೆ ಅಶಕ್ತ ಮತದಾರರು ಸಂಕಷ್ಟ ಪಡುವಂತಾಯಿತು. ಪಲಿಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಮತಗಟ್ಟೆಯಿದ್ದರೂ, ಅಲ್ಲಿ ಗಾಲಿ ಕುರ್ಚಿಯಿಲ್ಲದೆ ತೊಂದರೆಯಾಗಿತ್ತು. ಇಲ್ಲೆ ಮತಗಟ್ಟೆ ಸಿಬ್ಬಂದಿಗಳು ಗಾಲಿಕುರ್ಚಿ ನೀಡುವಂತೆ ಚುನಾವಣಾಧಿಕಾರಿಗಳಿಗೆ ತಿಳಿಸಿದ್ದರೂ ಕುರ್ಚಿ ನೀಡಿಲ್ಲ ಎಂದು ದೂರಿದರು.
ಕೆಲಕಾಲ ವಿಳಂಬ: ಹೆಜಮಾಡಿಕೋಡಿಯ ಮತಗಟ್ಟೆಯಲ್ಲಿ ತಾಂತ್ರಿಕ ತೊಂದರೆಯಿಂದ 20 ನಿಮಿಷ ವಿಳಂಬವಾಗಿ ಮತದಾನ ಆರಂಭವಾಗಿತ್ತು. ಬೆಳಗ್ಗೆ 7 ಗಂಟೆಗೆ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, ವಿದ್ಯುತ್ ಕೈಕೊಟ್ಟು ಪಣಿಯೂರಿನ ಮತಗಟ್ಟಯಲ್ಲಿ ಸುಮಾರು 45 ನಿಮಿಷಗಳ ಕಾಲ ಕತ್ತಲೆಯಲ್ಲಿ ಮತದಾನ ನಡೆಯಿತು.
ಅಭ್ಯರ್ಥಿಗಳ ಮತದಾನ: ಭಾರತೀಯ ಜನಶಕ್ತಿ ಕಾಂಗ್ರೆಸ್ ಅಭ್ಯರ್ಥಿ ಅನುಪಮಾ ಶೆಣೈ ಅವರು ತನ್ನ ತಂದೆ ಹಾಗೂ ಸಹೋದರನೊಂದಿಗೆ, ಎಂಇಪಿ ಪಕ್ಷದ ಅಭ್ಯರ್ಥಿ ಅಬ್ದುಲ್ ರಹ್ಮಾನ್ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್. ಮೆಂಡನ್ ಸಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ವೇಳೆಗೆ ಮತಚಲಾಯಿಸಿದರು.
ಕೆಲ ಮತಗಟ್ಟೆಗಳಲ್ಲಿ ಹಿರಿಯರು ಮನೆಯವರ ಸಹಾಯದಿಂದ ಆಗಮಿಸಿದರೆ, ಕೆಲವರು ಯಾರ ಸಹಾಯವಿಲ್ಲದೆ ಹಕ್ಕು ಚಲಾಯಿಸಿದರು. ಎಲ್ಲೂರು ಗ್ರಾಪಂನ ಮತಗಟ್ಟೆಯಲ್ಲಿ 93 ವರ್ಷದ ಜಯಲಕ್ಷ್ಮೀ ಯಾರ ಸಹಾಯವಿಲ್ಲದೆ ಮತದಾನ ಕೇಂದ್ರಕ್ಕೆ ಬಂದು ಮತಚಲಾಯಿಸಿದ್ದಾರೆ. ಮುಂಬೈನಲ್ಲಿದ್ದಾಗಲೂ ಮತದಾನ ಮಾಡುತ್ತಿದ್ದೆ. ಊರಿನಲ್ಲಿ ನೆಲೆಸಿದ ಬಳಿಕ ಎಲ್ಲಾ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಇದೇ ಗ್ರಾಮದ 91 ವರ್ಷದ ಸವೋತ್ತಮರಾವ್ ಅವರು ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ 48ನೇ ವರ್ಷದಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ್ದಾರೆ. ಈಗ ಊರಿಗೆ ಬಂದು ನೆಲೆಸಿದ ಬಳಿಕ 15 ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದೇನೆ. ಮತದಾನ ನಮ್ಮ ಹಕ್ಕು, ಅರ್ಹ ಮತದಾರರು ಹಕ್ಕನ್ನು ಚಲಾಯಿಸಬೇಕು ಎಂದರು.







