ನಕಲಿ ಮತ ಚಲಾಯಿಸಲು ಯತ್ನ ಆರೋಪ: ಅಸ್ಸಾಂ ಮೂಲದ ಇಬ್ಬರು ಸಹಿತ ಮೂರು ಮಂದಿ ಸೆರೆ

ಬಂಟ್ವಾಳ, ಮೇ 12: ನಕಲಿ ಮತದಾನ ಚಲಾಯಿಸಲು ಬಂದ ಅಸ್ಸಾಂ ಮೂಲದ ಇಬ್ಬರ ಸಹಿತ ಮೂವರನ್ನು ಮತಗಟ್ಟೆಯ ಪೋಲಿಂಗ್ ಏಜೆಂಟರು ಪತ್ತೆ ಹಚ್ಚಿ ಬಂಟ್ವಾಳ ನಗರ ಪೊಲೀಸರಿಗ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಗ್ರಹಾರ ಶಾಲಾ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಅಗಮಿಸಿದ ಅಸ್ಸಾಂ ಮೂಲದ ಚೋಸನ್ (22), ಅಜೇಯ್ ಮೆಕ್ಸ್ (24) ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನ 208 ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಬಂದಿದ್ದ ಪುತ್ತೂರು ತಾಲೂಕಿನ ಪಲ್ಲತ್ತೂರು ನಿವಾಸಿ ಶಕೀರ್ (17) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೋಸನ್ ಮತ್ತು ಅಜೇಯ್ ಬಂಟ್ವಾಳದಲ್ಲಿ ಸಂಸ್ಥೆಯೊಂದರಲ್ಲಿ ನೌಕರರಾಗಿದ್ದು, ಇವರಿಬ್ಬರು ಸಂಜೆಯ ಹೊತ್ತಿಗೆ ಅಗ್ರಹಾರದ ಮತಗಟ್ಟೆ ಸಂಖ್ಯೆ 59ರಲ್ಲಿ ಮತದಾನಕ್ಕಾಗಿ ಆಗಮಿದ್ದರು ಎನ್ನಲಾಗಿದೆ. ಮತ ಕೇಂದ್ರದಲ್ಲಿದ್ದ ಪೋಲಿಂಗ್ ಅಧಿಕಾರಿ ಗಮನಿಸಿ ತಕ್ಷಣ ಸ್ಥಳದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೆ ಇಬ್ಬರನ್ನು ವಶಕ್ಕೆ ತೆಗೆದು ಕೊಂಡು ಬಂಟ್ವಾಳ ನಗರ ಠಾಣೆಗೆ ಒಪ್ಪಿಸಿದ್ದಾರೆ.





