ವಿಚ್ಛೇದನದ ಬಳಿಕ ಕಿರುಕುಳ ನೀಡಿದರೆ ಮಹಿಳೆಯು ಮಾಜಿಪತಿಯ ವಿರುದ್ಧ ದೂರು ಸಲ್ಲಿಸಬಹುದು:ಸುಪ್ರೀಂ

ಹೊಸದಿಲ್ಲಿ,ಮೇ 12: ವಿವಾಹ ವಿಚ್ಛೇದನದ ಬಳಿಕವೂ ತನ್ನ ಮಾಜಿ ಪತಿ ಕಿರುಕುಳ ನೀಡಿದರೆ ಮಹಿಳೆಯು ಕೌಟುಂಬಿಕ ಹಿಂಸೆ ಕಾಯ್ದೆಯಡಿ ಆತನ ವಿರುದ್ಧ ದೂರನ್ನು ದಾಖಲಿಸಬಹುದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಜೊತೆಯಲ್ಲಿ ಬದುಕುತ್ತಿಲ್ಲ ಎನ್ನುವುದು ಮಾಜಿ ಪತಿಯಿಂದ ಕಿರುಕುಳಕ್ಕೊಳಗಾದ ಮಹಿಳೆಗೆ ನೆಮ್ಮದಿಯನ್ನು ಕಲ್ಪಿಸಲು ನ್ಯಾಯಾಲಯಗಳಿಗೆ ತಡೆಯಾಗುವುದಿಲ್ಲ ಎಂದು ಹೇಳಿರುವ ರಾಜಸ್ಥಾನ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತು.
2013ರಲ್ಲಿ ವೈವಾಹಿಕ ವಿವಾದವೊಂದರ ವಿಚಾರಣೆ ಸಂದರ್ಭ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದ್ದು,ಪರಿತ್ಯಕ್ತ ಪತಿ ಇದನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದ.
2006,ಅ.26ರಂದು ಜಾರಿಗೆ ಬಂದಿರುವ ಕೌಟುಂಬಿಕ ಹಿಂಸೆಯಿಂದ ಮಹಿಳೆಯ ರಕ್ಷಣಾ ಕಾಯ್ದೆ,2005ನ್ನು ಪೂರ್ವಾನ್ವಯಗೊಳಿಸುವಂತಿಲ್ಲ ಎಂಬ ಮಾಜಿ ಪತಿಯ ಪರ ವಕೀಲ ದುಷ್ಯಂತ ಪರಾಶರ ಅವರ ವಾದವನ್ನು ನ್ಯಾಯಮೂರ್ತಿಗಳಾದ ರಂಜನ ಗೊಗೊಯ್, ಆರ್.ಭಾನುಮತಿ ಮತ್ತು ನವೀನ ಸಿನ್ಹಾ ಅವರ ಪೀಠವು ತಿರಸ್ಕರಿಸಿತು ಮತ್ತು ಮೇಲ್ಮನವಿಯನ್ನು ವಜಾಗೊಳಿಸಿತು.





