ಮತದಾನಕ್ಕಾಗಿ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತ: ನಾಲ್ವರು ಮೃತ್ಯು
7 ಮಂದಿಗೆ ಗಂಭೀರ ಗಾಯ

ಬೇಲೂರು,ಮೇ.12: ಮತದಾನಕ್ಕಾಗಿ ತಾಲೂಕಿನ ರಾಮೇನಹಳ್ಳಿ ಗ್ರಾಮದಿಂದ ಹತ್ತಿರದ ಚಿಲ್ಕೂರು ಮತಗಟ್ಟೆಗೆ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ಲಾರಿ ಢಿಕ್ಕಿಯಾದ ಪರಿಣಾಮ 4 ಜನರು ಮೃತಪಟ್ಟಿದ್ದು, 7 ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳಾದ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ರಾಮೇನಹಳ್ಳಿ ಕಾಲೋನಿಯ ನಿವಾಸಿಗಳು ಹತ್ತಿರದ ಚಿಲ್ಕೂರು ಗ್ರಾಮಕ್ಕೆ ತೆರಳುತ್ತಿರುವ ವೇಳೆ ಹಾಸನ ಕಡೆಯಿಂದ ವೇಗವಾಗಿ ಬಂದ ಲಾರಿ ಆಟೋಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಶಾರದಮ್ಮ(70) ಕಮಲಮ್ಮ(65) ಜಯಲಕ್ಷ್ಮಿ(45) ಎಂಬವರು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.
ತೀವ್ರ ಗಾಯಗೊಂಡ ಲಕ್ಷ್ಮೇಗೌಡ(65) ರವರು ಹಾಸನದ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ಧಾರೆ ಎಂದು ತಿಳಿದು ಬಂದಿದೆ. ಉಳಿದ 7 ಜನರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಮತ್ತು ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋ ಚಾಲಕ ಸ್ಥಳೀಯ ರಾಮೇನಹಳ್ಳಿ ಗ್ರಾಮದ ಮುಲ ನಿವಾಸಿ ಎಂದು ತಿಳಿದುಬಂದಿದ್ದು, ಚಿಲ್ಕೂರು ಮತಗಟ್ಟೆಗೆ ಮತದಾರರನ್ನು ಕರೆದುಕೊಂಡು ಹೋಗುವ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬೇಲೂರು ಪೊಲೀಸ್ ಸಿಪಿಐ ಯೋಗೀಶ್ ಹಾಗೂ ಪಿಎಸ್‍ಐ ಶರತ್ ಧಾವಿಸಿ ಪ್ರಕರಣ ದಾಖಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.







